ಟ್ವಿಟ್ಟರ್ ಪ್ರವೇಶಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ್ರು!
ಸಮ್ಮಿಶ್ರ ಸರಕಾರ ಐದು ವರ್ಷಗಳ ಕಾಲ ಜನಪರವಾಗಿ ಆಡಳಿತ ನಡೆಸುವ ಮೂಲಕ ರಾಜ್ಯದ ಅಭಿವೃದ್ಧಿ ಹೊಸ ಎತ್ತರಕ್ಕೇರಲಿ ಎಂದು ಹೆಚ್.ಡಿ.ದೇವೇಗೌಡರು ಹಾರೈಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ 100 ದಿನಗಳನ್ನು ಪೂರೈಸಿದ ಬೆನ್ನಲ್ಲೇ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಸಾಮಾಜಿಕ ಮಾಧ್ಯಮ ಟ್ವಿಟ್ಟರ್'ನಲ್ಲಿ ಖಾತೆ ತೆರೆದಿದ್ದಾರೆ.
ಇದುವರೆಗೂ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಇದೀಗ @H_D_Devegowda ಎಂಬ ಹೆಸರಿನಲ್ಲಿ ಟ್ವಿಟ್ಟರ್ ಖಾತೆ ತೆರೆದಿದ್ದು, 100 ದಿನಗಳನ್ನು ಪೂರೈಸಿದ ಸಮ್ಮಿಶ್ರ ಸರ್ಕಾರಕ್ಕೆ ಶುಭ ಹಾರೈಸಿದ್ದಾರೆ.
"ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತ್ರತ್ವದ ಮೈತ್ರಿಕೂಟ ಸರಕಾರ ಶತದಿನಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಮೈತ್ರಿಕೂಟದಲ್ಲಿರುವ ಸಚಿವರು ಹಾಗೂ ಶಾಸಕರೆಲ್ಲರಿಗೂ ಶುಭ ಕೋರುತ್ತೇನೆ. ಈ ಸರಕಾರ ಐದು ವರ್ಷಗಳ ಕಾಲ ಜನಪರವಾಗಿ ಆಡಳಿತ ನಡೆಸುವ ಮೂಲಕ ರಾಜ್ಯದ ಅಭಿವೃದ್ಧಿ ಹೊಸ ಎತ್ತರಕ್ಕೇರಲಿ" ಎಂದು ಹೆಚ್.ಡಿ.ದೇವೇಗೌಡರು ಹಾರೈಸಿದ್ದಾರೆ.
@H_D_Devegowda ಹೆಸರಿನಲ್ಲಿ ತೆರೆದಿರುವ ಖಾತೆಯಲ್ಲಿ ಆಗಸ್ಟ್ 22ರಂದು ಪ್ರವಾಹ ಪೀಡಿತ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಬಗ್ಗೆ ಪೋಸ್ಟ್ ಮಾಡಿರುವ ದೇವೇಗೌಡರು, ಕಳೆದ ಒಂದು ವಾರದಿಂದ ಟ್ವಿಟ್ಟರ್'ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಇನ್ನೂ @H_D_Devegowda ಖಾತೆ ಅಧಿಕೃತ (ವೆರಿಫೈಡ್ ಅಕೌಂಟ್) ಆಗಿಲ್ಲ.