ಮೈಸೂರು : ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ಇಂದು ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಮನೆಗೆ  ಭೇಟಿ ನೀಡಿದರು.


COMMERCIAL BREAK
SCROLL TO CONTINUE READING

ಇಲ್ಲಿ ನಡೆಯುತ್ತಿರುವ ಜೆಡಿಎಸ್ ಪಂಚರತ್ನ ರಥಯಾತ್ರೆ ಕಾರ್ಯಗಾರದಲ್ಲಿ ಪಾಲ್ಗೊಂಡ ನಂತರ ನೇರವಾಗಿ ಒಂಟಿಕೊಪ್ಪಲ್ ನಲ್ಲಿರುವ ಜಿ.ಟಿ.ದೇವೇಗೌಡರ ಮನೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆಗಮಿಸಿದರು.


ಇದನ್ನೂ ಓದಿ : ರಸ್ತೆ ಗುಂಡಿ ಮುಚ್ಚಲಾಗದ ಸರ್ಕಾರದಿಂದ ಇನ್ಯಾವ ಅಭಿವೃದ್ಧಿ ಸಾಧ್ಯ?: ಸಿಎಂಗೆ ಕಾಂಗ್ರೆಸ್ ಪ್ರಶ್ನೆ


ಮನೆಗೆ ಬಂದ ಮಾಜಿ ಪ್ರಧಾನಿಗಳನ್ನು ಜಿ.ಟಿ.ದೇವೇಗೌಡರು ಕುಟುಂಬ ಸಮೇತರಾಗಿ ಆತ್ಮೀಯವಾಗಿ ಬರ ಮಾಡಿಕೊಂಡರು. ಬಳಿಕ ಕೆಲ ಹೊತ್ತು ಅವರ ಮನೆಯಲ್ಲೇ ಇದ್ದ ಹೆಚ್.ಡಿ.ದೇವೇಗೌಡರು, ಜಿಟಿ ದೇವೇಗೌಡರು, ಮತ್ತವರ ಕುಟುಂಬ ಸದಸ್ಯರ ಜತೆ ಕುಶಲೋಪರಿ ನಡೆಸಿದರು.


ಈ ಸಂದರ್ಭದಲ್ಲಿ ತೀವ್ರ ಭಾವೋದ್ವೇಗಕ್ಕೆ ಒಳಗಾದ ಜಿಟಿ ದೇವೇಗೌಡರು, ಗಳಗಳನೆ ಕಣ್ಣೀರಿಟ್ಟರು.


ಈ ಸಂದರ್ಭದಲ್ಲಿ ಜಿಟಿ ದೇವೇಗೌಡರನ್ನು ಪಕ್ಕದಲ್ಲೇ ಕೂರಿಸಿಕೊಂಡು ಮಾಧ್ಯಮಗಳ ಜತೆ ಮಾತನಾಡಿದರು. ಜಿ.ಟಿ.ದೇವೇಗೌಡರನ್ನು ಮರಿ ದೇವೇಗೌಡ ಎಂದು ಕರೆಯುತ್ತೇನೆ. ನಾನು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಜಿಟಿಡಿ ಬೆಳೆಯಲು ಬಿಡಬಾರದು ಎಂದು ಎಂಪಿ ಚುನಾವಣೆಯಲ್ಲಿ ಸೋಲಿಸಿದರು. ಹಾಗೆ ಸೋಲಿಗೆ ಕಾರಣರಾದವರು ಈಗ ನಮ್ಮ ಜತೆಯಲ್ಲಿ ಇಲ್ಲ ಎಂದು ಮಾಜಿ ಪ್ರಧಾನಿಗಳು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಚಾಟಿ ಬೀಸಿದರು.


ಜಿಟಿಡಿ ಬೆಳೆಯಲು ಬಿಟ್ಟರೆ ಆಕ್ರಮಣ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿ ಅವರ ಬೆಳವಣಿಗೆಯನ್ನು ತಡೆಯಲು ಪ್ರಯತ್ನ ಮಾಡಿದರು. ಎಲ್ಲವನ್ನೂ ತಿಳಿದುಕೊಂಡೆ ಜಿಟಿಡಿ ಮನೆಗೆ ಬಂದಿದ್ದೇನೆ. ಇವತ್ತು ನನಗೆ ಸಂತೋಷವಾಗಿದೆ. ಒಗ್ಗಟ್ಟಾಗಿ ಇರಬೇಕು. ಸಮಯ ಬಂದಿದೆ, ಎಲ್ಲಾ ಒಗ್ಗಟ್ಟಾಗಿ ಸೇರಿದ್ದೇವೆ, ತುಂಬಾ ಸಂತೋಷದ ವಿಷಯ ಇದು ಎಂದರು ಮಾಜಿ ಪ್ರಧಾನಿಗಳು.


ಪಾರ್ಲಿಮೆಂಟ್ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಎದುರಾಳಿಯನ್ನು ಎದುರಿಸುವ ಶಕ್ತಿ ಇದೆ. ಆ ಶಕ್ತಿಯನ್ನು ಸಮರ್ಥವಾಗಿ  ಬಳಸಿಕೊಳ್ಳಬೇಕು ಎಂದು ಅವರು ಮಾರ್ಮಿಕವಾಗಿ ಹೇಳಿದರು.


ಬಳಿಕ ಮಾತನಾಡಿದ ಜಿಟಿ ದೇವೇಗೌಡರು; ಹೆಚ್‌.ಡಿ.ದೇವೇಗೌಡರಿಗೆ ನನ್ನ ಬಗ್ಗೆ ಪ್ರೀತಿ ಇದೆ, ಮರಿ ದೇವೇಗೌಡ ಎಂದು ನನ್ನನ್ನು ಕರೆಯುತ್ತಿದ್ದರು. ಜಿಟಿಡಿ ಬಿಟ್ಟು ಹೋಗಲ್ಲ ಜೆಡಿಎಸ್ ಪಕ್ಷದಲ್ಲೆ ಇರುತ್ತಾನೆ ಎಂದು ಹೆಚ್.ಡಿ.ದೇವೇಗೌಡರು ಹೇಳಿದರು. ಅವರಿಗೆ ನನ್ನ ಮೇಲೆ ಇರುವ ವಿಶ್ವಾಸಕ್ಕೆ ಮನಸ್ಸು ತುಂಬಿ ಬಂದಿದೆ ಎಂದರು.


ಹಿಂದೆ ಹಲವು ಸ್ಥಾನಮನವನ್ನು ಮಾಜಿ ಪ್ರಧಾನಿಗಳು ನನಗೆ ನೀಡಿದ್ದರು. ಮೂರು ವರ್ಷ ದೂರ ಇದ್ದರೂ ನನ್ನ ಬಗ್ಗೆ ಅವರಲ್ಲಿನ ಪ್ರೀತಿ ಕಡಿಮೆ ಆಗಿರಲಿಲ್ಲ. ಎಂದೂ ನನ್ನ ಬಗ್ಗೆ ಲಘುವಾಗಿ ಒಂದು ಮಾತನ್ನೂ ಆಡಲಿಲ್ಲ. ಅವರು, ಪ್ರಾದೇಶಿಕ ಪಕ್ಷ ಕಟ್ಟಿ ಉಳಿಸಿ ಬೆಳೆಸಿದರು. ಹೆಚ್.ಡಿ.ದೇವೇಗೌಡರು ಕಂಡ ಕನಸನ್ನು ನನಸು ಮಾಡುತ್ತೇನೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದು ಮಾತನಾಡುತ್ತಲೇ ಭಾವುಕರಾದ ಜಿಟಿ ದೇವೇಗೌಡರು ಬಿಕ್ಕಿಬಿಕ್ಕಿ ಕಣ್ಣೀರಿಟ್ಟರು.


ಇದನ್ನೂ ಓದಿ : ನ.11 ರಂದು ಪಿಎಂ ಭೇಟಿ : ಸಂಚಾರ ವ್ಯವಸ್ಥೆಗೆ ತೊಡಕಾಗದಂತೆ ಕ್ರಮಕ್ಕೆ ಸಿಎಂ ಸೂಚನೆ


ದೊಡ್ಡವರು ನನ್ನನ್ನು ಪ್ರೀತಿಯ ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ನಾನು ಜೆಡಿಎಸ್ ನಲ್ಲಿ ಉಳಿಯುತ್ತೇನೆ. ಯಾವುದೇ ತ್ಯಾಗ ಮಾಡಲು ಸಿದ್ದ ಇದ್ದೇನೆ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತೇನೆ. ಅದಕ್ಕಾಗಿ ದುಡಿಯುತ್ತೇನೆ. ಈಗ ನಮ್ಮಲ್ಲಿ ಯಾವುದೇ ಮುನಿಸು ಇಲ್ಲ, ಒಂದೇ ಒಂದು ದಿನ ಪಕ್ಷಕ್ಕೆ ಕಳಂಕ ಅಥವಾ ಧಕ್ಕೆ ತರುವ ಕೆಲಸ ಮಾಡಿಲ್ಲ ಎಂದರು ಜಿಟಿ ದೇವೇಗೌಡರು


ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರುವಂತೆ  ಕರೆದಿದ್ದರು. ಬಿಜೆಪಿಯವರೂ ಕರೆದಿದ್ದಾರೆ. ಆದರೆ ನಾನು ಜೆಡಿಎಸ್  ಬಿಟ್ಟು ಹೋಗಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.


ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಸಾ.ರಾ.ಮಹೇಶ್, ಸಿ ಎಸ್ ಪುಟ್ಟರಾಜು  ಸೇರಿದಂತೆ ಪಕ್ಷದ ಶಾಸಕರು, ಮುಖಂಡರು ಹಾಜರಿದ್ದರು.


ಜಿಟಿ ದೇವೇಗೌಡರ ಪತ್ನಿ ಲಲಿತಾ ಅವರು, ಅವರ ಪುತ್ರ ಜಿ.ಡಿ. ಹರೀಶ್ ಅವರು ಇದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.