ಸಿಎಂ ಸಿದ್ದರಾಮಯ್ಯರನ್ನು ಹೊಗಳಿದ ಮಾಜಿ ಪ್ರಧಾನಿ ದೇವೇಗೌಡರು
ಸಿದ್ದರಾಮಯ್ಯ ಸರ್ಕಾರವನ್ನು ಭ್ರಷ್ಟಾಚಾರ ಇಲ್ಲದ ಸರ್ಕಾರ ಎಂದು ಹೇಳಿದ ಎಚ್ಡಿಡಿ.
ಬಳ್ಳಾರಿ: ರಾಜ್ಯದಲ್ಲಿ ನನ್ನ ಸರ್ಕಾರ ಬಿಟ್ಟರೆ, ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ ಇಲ್ಲದ ಸರ್ಕಾರ ಎಂದು ಹೇಳಬಲ್ಲೇ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಡಿ ನಮ್ಮ ರಾಜ್ಯದಲ್ಲಿ ಇರುವುದು ಯಾವುದೇ ಕಪ್ಪು ಚುಕ್ಕೆ ಇಲ್ಲದ ಸರ್ಕಾರ ಎಂದು ಸದ್ಯಕ್ಕೆ ನಾವು ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ನಂತರ ತಮ್ಮ ಪುತ್ರ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದ ಅವರು ಕುಮಾರಸ್ವಾಮಿ ಬಗ್ಗೆ 'ಜಂತಕಲ್ ಮೈನಿಂಗ್ ಕೇಸ್' ಸುಪ್ರೀಂಕೋರ್ಟ್ ನಲ್ಲಿ ಇರುವುದರಿಂದ ನಾನು ಅವರ ಸರ್ಕಾರವನ್ನು ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಹೇಳಿಲ್ಲ ಎಂದೂ ಸಹ ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ಸಿದ್ದರಾಮಯ್ಯ ಅವರ ಮೇಲೆ ಯಾವ ಕೇಸ್ ಇಲ್ಲದ ಕಾರಣ ಅವರದು ಭ್ರಷ್ಟಾಚಾರ ಇಲ್ಲದ ಸರ್ಕಾರ ಎಂದು ಹೇಳುತ್ತಿದ್ದೇನೆ ಎಂದು ವಿವರಿಸಿದ್ದಾರೆ.
ಇನ್ನು ದೇವೇಗೌಡರ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ದೇವೇಗೌಡರು ವ್ಯಂಗ್ಯವಾಗಿ ಮಾತನಾಡಿರುವುದನ್ನು ಮಾಧ್ಯಮದವರು ತಪ್ಪಾಗಿ ಬಿಂಬಿಸುತ್ತಿದ್ದೀರಿ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ದೊಡ್ಡಗೌಡರ ಈ ಹೇಳಿಕೆ ರಾಜಕೀಯ ಲೆಕ್ಕಾಚಾರವೋ? ಹೊಗಳಿಕೆಯೋ? ವ್ಯಂಗ್ಯವೋ? ಎಂಬುದು ಮುಂಬರುವ ದಿನಗಳಲ್ಲಿ ತಿಳಿಯಲಿದೆ.