`ಮನೆ ಮನೆಗೆ ಕುಮಾರಣ್ಣ` ಕಿರುಹೊತ್ತಿಗೆ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಎಚ್ಡಿಡಿ
ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ತಯಾರಿ. ಬಿಜೆಪಿ ವಿಸ್ತಾರಕ ಮತ್ತು ಮನೆಮನೆಗೆ ಕಾಂಗ್ರೆಸ್ ಪ್ರತಿಯಾಗಿ `ಮನೆ ಮನೆಗೆ ಕುಮಾರಣ್ಣ` ಕಾರ್ಯಕ್ರಮ ಆರಂಭ.
ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ತಾಲೀಮು ನಡೆಸುತ್ತಿರುವ ಜೆಡಿಎಸ್, ಇಂದು ಜೆಡಿಎಸ್ ಕಚೇರಿಯಲ್ಲಿ ಟಿಕೇಟ್ ಆಕಾಂಕ್ಷಿಗಳ ಸಭೆ ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ "ಮನೆ ಮನೆಗೆ ಕುಮಾರಣ್ಣ, ನಮ್ಮ ನಡಿಗೆ ಜೆಡಿಎಸ್ ಕಡೆಗೆ, ಕರ್ನಾಟಕಕ್ಕೆ ಕುಮಾರಣ್ಣ" ಎಂಬ ಹೆಸರಿನ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು.
ಸಭೆ ಆರಂಭಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಜಯ ಸಾಧಿಸ ಬೇಕಾದರೆ "ಮನೆಮನೆಗೆ ಕುಮಾರಣ್ಣ" ಕಿರುಹೊತ್ತಿಗೆ ಪ್ರತಿ ಮನೆಗೂ ತಲುಪಬೇಕು. ಈ ಪ್ರಯತ್ನವನ್ನು ಆಯಾ ಕ್ಷೇತ್ರದ ಅಭ್ಯರ್ಥಿಗಳು ಮಾಡಬೇಕೆಂದು ಕರೆ ನೀಡಿದರು.
ಶಸ್ತ್ರಚಿಕಿತ್ಸೆಯ ಬಳಿಕ ವಿಶ್ರಾಂತಿ ಪಡೆಯುತ್ತಿರುವ ಹೆಚ್.ಡಿ.ಕುಮಾರ ಸ್ವಾಮಿ ವಿಶ್ರಾಂತಿ ಹಿನ್ನೆಲೆ ಟಿಕೇಟ್ ಆಕಾಂಕ್ಷಿಗಳ ಸಭೆಯಲ್ಲಿ ಹೆಚ್ಡಿಕೆ ಭಾಗಿಯಾಗಿಲ್ಲ. ನವೆಂಬರ್ 1 ರಿಂದ ಹೆಚ್ಡಿಕೆ ರಾಜ್ಯ ಪ್ರವಾಸಕ್ಕೆ ಮತ್ತೆ ಮುಂದಾಗುತ್ತಾರೆ ಎಂದು ಎಚ್ಡಿಡಿ ತಿಳಿಸಿದರು.
ಬೆಂಗಳೂರಿನ ಜೆ.ಪಿ.ಭವನದಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಸಭೆಯಲ್ಲಿ 224 ವಿಧಾನಸಭಾ ಕ್ಷೇತ್ರಗಳ ಆಕಾಂಕ್ಷಿಗಳು ಭಾಗಿಯಾಗಿದ್ದರು.
ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ, ಮಾಜಿ ಸಚಿವ ಹೆಚ್.ವಿಶ್ವನಾಥ್, ಶಾಸಕರಾದ ಹೆಚ್.ಡಿ.ರೇವಣ್ಣ, ಜಿ.ಟಿ.ದೇವೇಗೌಡ, ವೈ.ಎಸ್.ವಿ.ದತ್ತಾ , ರಮೇಶ್ ಬಾಬು,ಹೆಚ್.ಸಿ.ನೀರಾವರಿ, ಸೇರಿದಂತೆ ಪ್ರಮುಖರು ಜಯಂತ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.