ಬೆಂಗಳೂರು: ಕೆ.ಬಿ.​ ಕೋಳಿವಾಡ ಸ್ಪೀಕರ್ ಆಗಿದ್ದಾಗ ಅವರಿಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಗೆ ಸರ್ಕಾರದ ಹಣದಿಂದ ಖರೀದಿಸಿದ್ದ ಸೋಫಾ ಹಾಗೂ ಮಂಚಗಳು ಈಗ ಅವರ ಸ್ವಂತ ಮನೆ ಸೇರಿವೆ.  


COMMERCIAL BREAK
SCROLL TO CONTINUE READING

ಸರ್ಕಾರಿ ಬಂಗಲೆಯಲ್ಲಿದ್ದ ದುಬಾರಿ ಬೆಲೆಯ ಸೋಫಾ ಸೆಟ್ ಹಾಗೂ ನಾಲ್ಕು ಮಂಚಗಳನ್ನು ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ.​ ಕೋಳಿವಾಡ ಅವರು ತಮ್ಮ ಸ್ವಂತ ಮನೆಗೆ ಕೊಂದೊಯ್ದಿರುವ ಪ್ರಕರಣ ಜು.24(ಮಂಗಳವಾರ) ಬೆಳಕಿಗೆ ಬಂದಿದೆ.


ಕೋಳಿವಾಡ ಅವರು ವಿಧಾನ ಸಭಾಧ್ಯಕ್ಷರಾಗಿದ್ದಾಗ 2016ರಲ್ಲಿ ಅವರು ವಾಸವಾಗಿದ್ದ ಸರ್ಕಾರಿ ಬಂಗಲೆಗೆ ಪೀಠೊಪಕರಣಗಳನ್ನು ವಿಧಾನಸಭೆ ಸಚಿವಾಲಯದಿಂದ ಖರೀದಿಸಿದ್ದರು. ಅವರ ಅಧಿಕಾರ ಅವಧಿ ಮುಕ್ತಾಯವಾದ ನಂತರ ನಿಯಮಗಳ ಪ್ರಕಾರ ವಿಧಾನಸಭೆಗೆ ವಾಪಸ್‌ ನೀಡಬೇಕು. ಆದರೆ, ಕೋಳಿವಾಡ ಕೆಲವು ಪೀಠೊಪಕರಣಗಳನ್ನು ವಾಪಸ್‌ ಮಾಡದೆ ತಮ್ಮ ಖಾಸಗಿ ನಿವಾಸಕ್ಕೆ ತೆಗೆದುಕೊಂಡು ಹೋಗಿದ್ದಾರೆ.


ಇನ್ನು ಈ ಬಗ್ಗೆ ಸಮರ್ಥಿಸಿಕೊಂಡಿರುವ ಮಾಜಿ ಸ್ಪೀಕರ್ ಕೋಳಿವಾಡ, ಪೀಠೊಪಕರಣಗಳನ್ನು ನನಗೆ ಬೇಕಾದ ರೀತಿಯಲ್ಲಿ ಮಾಡಿಸಿಕೊಂಡಿದ್ದೇನೆ. ಅದರ ಹಣ ಪಾವತಿಸುವುದಾಗಿ ಪತ್ರ ಬರೆದಿದ್ದೇನೆ. ಅದರ ಒಟ್ಟು ಬೆಲೆ 3 ಲಕ್ಷ ರೂ.ಆಗಬಹುದು. ವಿಧಾನಸಭಾ ಕಾರ್ಯದರ್ಶಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಅವರು ಈ ಪೀಠೋಪಕರಣಗಳಿಗೆ ದರ ನಿಗದಿ ಮಾಡಿದ ಮೇಲೆ ಅದನ್ನು ಭರಿಸುತ್ತೇನೆ. ಈ ಹಿಂದೆಯೂ ಹಲವರು ಈ ರೀತಿ ಮಾಡಿದ್ದಾರೆ. ಹೀಗಾಗಿ ನಾನೂ ತಂದಿದ್ದೇನೆ ಎಂದಿದ್ದಾರೆ.


ಈ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭೆ ಕಾರ್ಯದರ್ಶಿ ಎಸ್‌.ಮೂರ್ತಿ, ಕೋಳಿವಾಡ ಅವರು 6 ಪೀಠೊಪಕರಣಗಳನ್ನು ಪಡೆದುಕೊಂಡಿದ್ದರು. ಅದರಲ್ಲಿ ಎರಡು ವಾಪಸ್‌ ನೀಡಿದ್ದರು. ನಾಲ್ಕು ಪೀಠೊಪಕರಣಗಳನ್ನು ಹಿಂದಿರುಗಿಸುತ್ತೇನೆ, ಇಲ್ಲದಿದ್ದರೆ ಅದರ ದರ ನಿಗದಿ ಮಾಡಿದರೆ ಹಣ ಪಾವತಿಸುವುದಾಗಿ ಪತ್ರ ಬರೆದಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ದರ ನಿಗದಿ ಮಾಡಬೇಕಾಗುತ್ತದೆ. ಪೀಠೊಪಕರಣಗಳನ್ನು ದಾಸ್ತಾನು ಮಾಡಲು ನಮ್ಮ ಬಳಿ ಸ್ಥಳದ ಕೊರತೆ ಇರುವುದರಿಂದ ಬೆಲೆ ನಿಗದಿ ಮಾಡಿ ಹಣ ಪಾವತಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.