ವಲಸೆ ಕಾರ್ಮಿಕರಿಗೆ ಗುರುವಾರದವರೆಗೂ ಉಚಿತ ಬಸ್ ಸೌಲಭ್ಯ ವಿಸ್ತರಣೆ
ಶನಿವಾರ (ಮೇ 2) 550 ಬಸ್ಸುಗಳಲ್ಲಿ ಅಂದಾಜು 16,500 ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಭಾನುವಾರ (ಮೇ 3) 951 ಕೆ.ಎಸ್.ಆರ್.ಟಿ.ಸಿ. (KSRTC) ಬಸ್ ಗಳನ್ನು ಒದಗಿಸಲಾಗಿದ್ದು ಅಂದಾಜು 30 ಸಾವಿರ ಜನರು ತಮ್ಮ ಊರುಗಳಿಗೆ ಪ್ರಯಾಣ ಮಾಡಿರುತ್ತಾರೆ.
ಬೆಂಗಳೂರು: ವಲಸೆ ಕಾರ್ಮಿಕರಿಗೆ ಪ್ರಕಟಿಸಿರುವ ಉಚಿತ ಬಸ್ ಪ್ರಯಾಣ ಸೌಲಭ್ಯ ಸುಗಮವಾಗಿ ನಡೆಯುತ್ತಿದ್ದು ಅದನ್ನು ಇನ್ನು ಗುರುವಾರದವರೆಗೂ (ಮೇ 7) ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ತಿಳಿಸಿದ್ದಾರೆ.
ಮಂಗಳವಾರ ಈ ಸೌಲಭ್ಯ ಕೊನೆಗೊಳುವದಿತ್ತು. ಆದರೆ ಕಾರ್ಮಿಕರ ಮತ್ತು ಜನರ ಅನುಕೂಲಕ್ಕಾಗಿ ಉಚಿತ ಸೌಲಭ್ಯವನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ. ಕಾರ್ಮಿಕರು ಮತ್ತು ಇತರೆ ಜನರು ಬಸ್ ನಿಲ್ದಾಣಗಳಲ್ಲಿ ಜಮಾವಣೆಯಾಗದೆ ನೆಮ್ಮದಿಯಿಂದ ತಮ್ಮ ಊರುಗಳಿಗೆ ತೆರಳಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.
ಕೆ.ಎಸ್.ಆರ್.ಟಿ.ಸಿ. (KSRTC) ಬಸ್ ಗಳನ್ನು ಒದಗಿಸಲಾಗಿದ್ದು ಅಂದಾಜು 30 ಸಾವಿರ ಜನರು ತಮ್ಮ ಊರುಗಳಿಗೆ ಪ್ರಯಾಣ ಮಾಡಿರುತ್ತಾರೆ. ಸೋಮವಾರ (ಮೇ 4) ಈಗಾಗಲೇ 50ಕ್ಕೂ ಹೆಚ್ಚು ಬಸ್ ಗಳಲ್ಲಿ ಸುಮಾರು 1,500 ಪ್ರಯಾಣಿಕರು ತಮ್ಮ ಊರಿಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ 550 ಬಸ್ಸುಗಳು ಮತ್ತು ರಾಜ್ಯದ ವಿವಿಧ ನಗರಗಳಲ್ಲಿ 400 ಬಸ್ಸುಗಳನ್ನು ಈ ಸೌಲಭ್ಯಕ್ಕೋಸ್ಕರ ಕಾಯ್ದಿರಿಸಲಾಗಿದೆ.
ರವಿವಾರದಂದು ಬಿಹಾರದ ಪಾಟ್ನಾಕ್ಕೆ ಎರಡು, ಜಾರ್ಖಂಡಿನ ರಾಂಚಿಗೆ ಒಂದು ಮತ್ತು ಒಡಿಸ್ಸಾದ ಭುವನೇಶ್ವರಕ್ಕೆ ಒಂದು ರೈಲು, ಒಟ್ಟು ನಾಲ್ಕು ರೈಲುಗಳು 4,800 ಪ್ರಯಾಣಿಕರನ್ನು ಆಯಾ ರಾಜ್ಯಗಳಿಗೆ ಕರೆದೊಯ್ದಿದೆ. ಸೋಮವಾರ ಎರಡು ರೈಲುಗಳು ರಾಜಸ್ಥಾನದ ಜೈಪುರ್ ಮತ್ತು ಬಿಹಾರದ ಪಾಟ್ನಾಕ್ಕೆ ಹೊರಡಲಿವೆ. ಪ್ರಯಾಣಕ್ಕಿಂತ ಮೊದಲು ಎಲ್ಲಾ ಜನರಿಗೂ ಉಚಿತ ಊಟ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಮುಖ್ಯಮಂತ್ರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.