ಐಟಿ ಸಿಟಿ ಜನರಿಗೆ ಉಚಿತ ವೈಫೈ ಭಾಗ್ಯ, 198 ವಾರ್ಡ್ಗಳಲ್ಲಿ ಸಿಸಿಟಿವಿ ಕಡ್ಡಾಯ-ಬಿಬಿಎಂಪಿ
ಬೆಂಗಳೂರು ನಗರದ ಎಲ್ಲಾ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಉಚಿತ ವೈಫೈ ಸೌಲಭ್ಯ ಒದಗಿಸಲು ಬಿಬಿಎಂಪಿ ನಿರ್ಧರಿಸಿದೆ.
ಬೆಂಗಳೂರು : ನಗರದ ಎಲ್ಲಾ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಉಚಿತ ವೈಫೈ ಸೌಲಭ್ಯ ಒದಗಿಸಲು ಬಿಬಿಎಂಪಿ ನಿರ್ಧರಿಸಿದೆ.
ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ನಗರದ 198 ವಾರ್ಡ್ಗಳಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ಉಚಿತ ವೈಫೈ ಸೌಲಭ್ಯ ಕುರಿತಂತೆ ಎರಡು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು ಇದರಿಂದ ಜನತೆಗೆ ಉಪಯೋಗವಾಗಲಿದೆ.
ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ ಕಡ್ಡಾಯ ಸಿಸಿಟಿವಿ ಅಳವಡಿಸುವಂತೆ ಆಯುಕ್ತರಿಗೆ ತಿಳಿಸಲಾಗಿದೆ. ಇದಕ್ಕಾಗಿ ಈಗಾಗಲೇ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಬಿಬಿಎಂಪಿ ಮೇಯರ್ ಆರ್. ಸಂಪತ್ ರಾಜ್ ಹೇಳಿದ್ದಾರೆ.
ಈ ಕುರಿತು ವಿವರಣೆ ನೀಡಿರುವ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್, ‘‘ಕೇಂದ್ರ ಸರ್ಕಾರ ನಿರ್ಭಯಾ ಘಟನೆ ಹಿನ್ನೆಲೆಯಲ್ಲಿ ಸುರಕ್ಷಿತ ನಗರ ಯೋಜನೆಗೆ 8 ನಗರಗಳನ್ನು ಆಯ್ಕೆ ಮಾಡಿಕೊಂಡಿದೆ. ಅದರಲ್ಲಿ ಬೆಂಗಳೂರು ಸಹ ಸೇರಿದೆ. ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ರೂಪಿಸಿರುವ ಯೋಜನೆಗಳ ಕುರಿತು ನಾಲ್ಕು ವರದಿ ನೀಡುವಂತೆ ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದ ಸಮಿತಿ ಸೂಚಿಸಿದೆ. ವರದಿ ಸಲ್ಲಿಕೆ ಬಳಿಕ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು'' ಎಂದು ಹೇಳಿದ್ದಾರೆ.
ಇದರೊಂದಿಗೆ ‘‘ನಗರದಲ್ಲಿನ ಪ್ರತಿಯೊಂದು ಮನೆಗೆ ಪ್ರತ್ಯೇಕ ಡಿಜಿಟಲ್ ಸಂಖ್ಯೆ ನೀಡುವ ಪ್ರಕ್ರಿಯೆಯು ಅಂತಿಮ ಹಂತದಲ್ಲಿದ್ದು, ಮುಂದಿನ 15 ದಿನಗಳೊಳಗೆ ಈ ಯೋಜನೆಗೆ ಚಾಲನೆ ನೀಡಲಾಗುವುದು’’ ಎಂದು ಆಯುಕ್ತರು ತಿಳಿಸಿದರು.