ಈ ಗೆಲುವು ಸಮ್ಮಿಶ್ರ ಸರಕಾರಕ್ಕೆ ಜನರ ಒಪ್ಪಿಗೆಯ ಮುದ್ರೆ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್
ಬೆಂಗಳೂರು- ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಜಯ ಗಳಿಸುವ ಮೂಲಕ ಬಿಜೆಪಿಗೆ ಮುಖಭಂಗ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.
ನಾವೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿಗೆ ಜನರು ಮುಖಭಂಗ ಆಗುವಂತೆ ಮಾಡಿದ್ದಾರೆ. ಈ ಚುನಾವಣೆ ಮುಂದಿನ ಲೋಕಸಭಾ ಚುನಾವಣೆ ಗೆಲುವಿನ ಮುನ್ಸೂಚನೆ ಎಂದರು.
ಬಳ್ಳಾರಿ ಕ್ಷೇತ್ರವನ್ನೇ ಭದ್ರ ಕೋಟೆಯನ್ನಾಗಿ ಮಾಡಿ ಕೊಂಡಿದ್ದ ಬಿಜೆಪಿಗೆ ಅಲ್ಲಿನ ಮತದಾರರು ಪಾಠ ಕಲಿಸಿದ್ದಾರೆ. ಬಿಜೆಪಿ ಭದ್ರ ಕೋಟೆ ಒಡೆದು, ಕಾಂಗ್ರೆಸ್ ತನ್ನ ಅಸ್ತಿತ್ವ ಸಾರಿದೆ. ಈ ಮೊದಲು ಕೂಡ ಬಳ್ಳಾರಿ ಕಾಂಗ್ರೆಸ್ ಕೋಟೆಯಾಗಿತ್ತು ಎಂದರು.
ಶಿವಮೊಗ್ಗ ಕ್ಷೇತ್ರದಲ್ಲಿ ಕಳೆದ ಬಾರಿ ಎರಡು ಲಕ್ಷಕ್ಕೂ ಹೆಚ್ಚು ಅಂತರದಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ಕೇವಲ 52 ಸಾವಿರ ಮತಗಳ ಅಂತದಲ್ಲಿ ಗೆದ್ದಿದೆ. ಅಂದರೆ ಶಿವಮೊಗ್ಗದಲ್ಲೂ ಒಂದು ರೀತಿಯ ಸೋಲು ಅನುಭವಿಸಿದೆ. ಹೀಗಾಗಿ ಐದು ಕ್ಷೇತ್ರದಲ್ಲೂ ಮೈತ್ರಿ ಪಕ್ಷವೇ ಗೆದ್ದಂತಾಗಿದೆ.
ಈ ಗೆಲುವು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರಕ್ಕೆ ಮತದಾರರ ಒಪ್ಪಿಗೆ ಮುದ್ರೆ ಒತ್ತಿದ್ದು, ಐದು ವರ್ಷ ನಮ್ಮ ಸರಕಾರ ಸುಭದ್ರವಾಗಿರಲಿದೆ ಎಂದರು.