ಬೆಳಗಾವಿ: "2028ಕ್ಕೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು 'ಗಾಂಧಿ ಭಾರತ' ಕಾರ್ಯಕ್ರಮ ಮುನ್ನುಡಿಯಾಗಬೇಕು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.


COMMERCIAL BREAK
SCROLL TO CONTINUE READING

ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬೆಳಗಾವಿ ಅಧಿವೇಶನ ಶತಮಾನೋತ್ಸವ ಹಿನ್ನೆಲೆಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಅಂಗವಾಗಿ ಇದೇ ತಿಂಗಳು 26, 27ರಂದು ನಡೆಯಲಿರುವ ರಾಷ್ಟ್ರ ಮಟ್ಟದ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯನ್ನು ಶಿವಕುಮಾರ್ ಅವರು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆಸಿದರು.


ಇದನ್ನೂ ಓದಿ: ದೇಹದ ಈ 4 ಅಂಗಗಳಿಗೆ ತುಪ್ಪ ಸವರಿದರೆ ಎಷ್ಟು ಪ್ರಯೋಜನ ಗೊತ್ತಾ...!


ಈ ವೇಳೆ ಮಾತನಾಡಿದ ಅವರು, "ಗಾಂಧಿ ಭಾರತ ಕಾರ್ಯಕ್ರಮದ ಮೂಲಕ ಬೆಳಗಾವಿ ಇತಿಹಾಸ ಪುಟ ಸೇರುತ್ತಿದೆ. 26ರಂದು ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, 40 ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳು, 150 ಜನ ಸಂಸದರು, ಶಾಸಕರು ಹಾಗೂ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಮತ್ತೆ ಈ ಎಲ್ಲಾ ನಾಯಕರನ್ನು ಸೇರಿಸಿ ರಾಜ್ಯದಲ್ಲಿ ಯಾವಾಗ ಕಾರ್ಯಕ್ರಮ ಮಾಡುತ್ತೇವೋ ಗೊತ್ತಿಲ್ಲ" ಎಂದು ತಿಳಿಸಿದರು.


"ಇಂತಹ ಕಾರ್ಯಕ್ರಮ ಮತ್ತೆ ನಮ್ಮ ರಾಜ್ಯದಲ್ಲಿ ನಡೆಯುವಾಗ ನಾವು ಬದುಕಿರುತ್ತೇವೋ ಇಲ್ಲವೋ ಗೊತ್ತಿಲ್ಲ. ಯುವಕರಿಗೆ ಮತ್ತೆ ಆ ಪುಣ್ಯ ಸಿಗಬಹುದು. ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಬೆಳಗಾವಿ ಅಧಿವೇಶನಕ್ಕೆ ಶತಮಾನ ತುಂಬಿದೆ. ನೂರು ವರ್ಷಗಳ ಬಳಿಕ ಮತ್ತೆ ಬೆಳಗಾವಿಯಲ್ಲಿ ನಾವು ಮತ್ತೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಮಾಡುತ್ತಿದ್ದೇವೆ" ಎಂದರು.


"ನಮ್ಮ ಕರ್ನಾಟಕದವರಾದ ಮಲ್ಲಿಕಾರ್ಜುನ ಖರ್ಗೆ ಅವರು ಗಾಂಧೀಜಿ ಅವರು ಸ್ವೀಕರಿಸಿದ್ದ ಹುದ್ದೆಯಲ್ಲಿ ಇದ್ದಾರೆ. ಈ ಸಂದರ್ಭದಲ್ಲಿ ಈ ಕಾರ್ಯಕ್ರಮ ಮಾಡುತ್ತಿರುವುದು ಮತ್ತೊಂದು ವಿಶೇಷ. ಖರ್ಗೆ ಅವರ ಪಾಲಿಗೆ ಇದು ಒಂದು ಸೌಭಾಗ್ಯವೂ ಹೌದು. ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಎಲ್ಲಾ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ" ಎಂದು ಮಾಹಿತಿ ನೀಡಿದರು.


"ಬೆಳಗಾವಿಯಲ್ಲಿರುವ ಗಾಂಧಿ ಬಾವಿಯಲ್ಲಿ ನೀರು ತೆಗೆದುಕೊಂಡು ಇಲ್ಲಿನ ಜಾಗ ಸ್ವಚ್ಛ ಮಾಡಿ, ನಮ್ಮ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಈ ಜಾಗದಲ್ಲಿ ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದು, ಇದೇ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ. ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಇದು ಕಾಂಗ್ರೆಸ್ ಪಕ್ಷದ ಶಕ್ತಿ" ಎಂದು ಹೇಳಿದರು.


"ಬೆಳಗಾವಿ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಹೆಚ್.ಕೆ ಪಾಟೀಲ್, ವೀರಪ್ಪ ಮೊಯ್ಲಿ, ಬಿ.ಎಲ್ ಶಂಕರ್ ಅವರ ನೇತೃತ್ವದ ಸಮಿತಿಯಿಂದ 'ಗಾಂಧಿ ಭಾರತ' ಕಾರ್ಯಕ್ರಮದ ರೂಪುರೇಷೆ ನಿರ್ಧರಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಈ ಸಮಿತಿ ಸರ್ಕಾರ ಹಾಗೂ ಪಕ್ಷದ ವತಿಯಿಂದ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಸಲಹೆ ನೀಡುತ್ತಿದೆ.


ಈ ಕಾರ್ಯಕ್ರಮಕ್ಕೆ ಎರಡು ಜಾಗ ಆಯ್ಕೆ ಮಾಡಿದ್ದೇವೆ. ಗಾಂಧಿ ಭವನದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಗಾಂಧಿ ಪ್ರತಿಮೆ ಉದ್ಘಾಟನೆಯಾಗಲಿದೆ. ಭದ್ರತೆ ದೃಷ್ಟಿಯಿಂದ ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಆಹ್ವಾನ ಇರುವುದಿಲ್ಲ" ಎಂದರು.


"ಮರುದಿನ ಅಂದರೆ 27ರಂದು ಬೆಳಗ್ಗೆ 11 ಗಂಟೆಗೆ ಪಕ್ಷದ ಕಾರ್ಯಕರ್ತರ ಬೃಹತ್ ಸಭೆ ನಡೆಯಲಿದ್ದು, ರಾಜ್ಯದಾದ್ಯಂತ ಕಾರ್ಯಕರ್ತರು ಆಗಮಿಸಲಿದ್ದಾರೆ. ಪಂಚಾಯ್ತಿ ಮಟ್ಟದ ಚುನಾವಣೆಯಿಂದ ಎಲ್ಲಾ ಹಂತದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದವರು, ಪರಾಜಿತಗೊಂಡವರು, ಕಾಂಗ್ರೆಸ್ ಪಕ್ಷದ ಸದಸ್ಯರು ಸೇರಿ ಎಲ್ಲರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದೇವೆ.


ಈ ಕಾರ್ಯಕ್ರಮದಲ್ಲಿ ನಿಮಗೆ ಎಲ್ಲಾ ರೀತಿಯ ವ್ಯವಸ್ಥೆ ಕೆಪಿಸಿಸಿ ವತಿಯಿಂದ ಮಾಡಲಾಗುವುದು. ನಿಮ್ಮ ಜವಾಬ್ದಾರಿ ಏನು ಎಂದರೆ ನಿಮ್ಮ ಶಕ್ತಿ ಪ್ರದರ್ಶನ ಮಾಡುವುದು. ನೀವು ಈ ಕಾರ್ಯಕ್ರಮಕ್ಕೆ ಹಣ ಕೊಟ್ಟು ಜನರನ್ನು ಕರೆತರಬಾರದು. ಸ್ವಇಚ್ಛೆಯಿಂದ ಕಾರ್ಯಕರ್ತರನ್ನು ಕರೆತರಬೇಕು. ಪ್ರತಿ ಕ್ಷೇತ್ರದಿಂದ ಕನಿಷ್ಠ 5 ಸಾವಿರ ಜನರನ್ನು ಕರೆತರಬೇಕು. ಸುತ್ತಮುತ್ತಲ ಜಿಲ್ಲೆಯಿಂದ ಹೆಚ್ಚು ಜನರನ್ನು ಕರೆತನ್ನಿ. ಬೆಂಗಳೂರು ಹಾಗೂ ಇತರೆ ಭಾಗಗಳಿಂದ ಕರೆತರುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ" ಎಂದು ತಿಳಿಸಿದರು.


"75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಾವು ಮಾಡಿದ ಸ್ವಾತಂತ್ರ್ಯ ನಡಿಗೆಯನ್ನು ಮತ್ತೆ ಮಾಡಲು ಸಾಧ್ಯವೇ?


ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸ್ವಾತಂತ್ರ್ಯ ನಡಿಗೆ, ಮೇಕೆದಾಟು ಪಾದಯಾತ್ರೆ, ಭಾರತ ಜೋಡೋ ಯಾತ್ರೆ ಮುನ್ನುಡಿ ಬರೆಯಿತೋ ಅದೇ ರೀತಿ ಈ ಕಾರ್ಯಕ್ರಮ ಮತ್ತೊಂದು ಇತಿಹಾಸಕ್ಕೆ ಮುನ್ನುಡಿ ಬರೆಯಬೇಕು.


ಈ ಕಾರ್ಯಕ್ರಮದಲ್ಲಿ 7-8 ಕೋಟಿ ಖರ್ಚು ಮಾಡಿ ಬೆಳಗಾವಿಯಲ್ಲಿ ಮೈಸೂರು ದಸರಾ ಮಾದರಿಯಲ್ಲಿ ದೀಪಾಲಂಕಾರ, 1-2 ಕೋಟಿ ವೆಚ್ಚದಲ್ಲಿ ಫ್ಲೆಕ್ಸ್ ಹಾಕಿಸಲಾಗುತ್ತಿದೆ. ಈ ಕಾರ್ಯಕ್ರಮ ನೋಡಿ ಜನ ಕಣ್ತುಂಬಿಕೊಳ್ಳಬೇಕು" ಎಂದರು.


"ಕೆಪಿಸಿಸಿ ಅಧ್ಯಕ್ಷನಾಗಿ ನಾನು ದೆಹಲಿ ನಾಯಕರ ಬಳಿ ಹೋಗಿ, ಈ ಸುಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನು ಗುಜರಾತ್, ದೆಹಲಿ ಹಾಗೂ ಬೇರೆ ರಾಜ್ಯಗಳಲ್ಲಿ ಮಾಡಬೇಡಿ, ಈ ಕಾರ್ಯಕ್ರಮದ ಜವಾಬ್ದಾರಿ ನಾನು ವಹಿಸಿಕೊಳ್ಳುತ್ತೇನೆ ಎಂದು ಒಪ್ಪಿಸಿದ್ದೇನೆ" ಎಂದು ತಿಳಿಸಿದರು.


"ಸ್ವಾತಂತ್ರ ಹೋರಾಟಕ್ಕೆ ಸ್ವಾಭಿಮಾನದ ಕಿಚ್ಚನ್ನು ಹಚ್ಚಿದ ಮಹಾತ್ಮಾ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡು ಈ ದೇಶದ ಸ್ವಾತಂತ್ರ್ಯಕ್ಕೆ ನೀಡಿದ ಸ್ಪೂರ್ತಿಯನ್ನು ನಾವೆಲ್ಲರೂ ಮತ್ತೆ ಈ ಭೂಮಿಯಿಂದ ಪಡೆಯಬೇಕು" ಎಂದು ಹೇಳಿದರು.


"ಇದು ನನ್ನ ಕಾರ್ಯಕ್ರಮವಲ್ಲ, ನನ್ನ ಮದುವೆಯಲ್ಲ. ಕಾಂಗ್ರೆಸ್ ಪಕ್ಷದ ಭವಿಷ್ಯ. ಇದು ದೇಶದ ಹಬ್ಬ‌. ಮಹಾತ್ಮ ಗಾಂಧಿಯವರು ಸ್ವಾತಂತ್ರ ಕಿಚ್ಚನ್ನು ಹಚ್ಚಿದ ಸಂದರ್ಭವನ್ನು ಹಬ್ಬದಂತೆ ನಾವು ಆಚರಿಸುತ್ತಿದ್ದೇವೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ಕಾರಣಕ್ಕೆ ಪ್ರಜಾಪ್ರಭುತ್ವ ಸಂವಿಧಾನ ಜಾರಿಯಾಗಿದೆ. ಇದನ್ನು ಉಳಿಸಲು ಮತ್ತೊಮ್ಮೆ ನಾವು ಗಾಂಧಿಯವರ ಪ್ರೇರಣೆಯನ್ನು ತೆಗೆದುಕೊಳ್ಳಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು" ಎಂದರು.


"ಬಿಜೆಪಿಯವರು ಒಂದು ದೇಶ ಒಂದು ಚುನಾವಣೆ ಹುನ್ನಾರ ಮಾಡುತ್ತಿದ್ದಾರೆ. ಬೇರೆಯವರು ಬೇರೆ ಬೇರೆ ರೀತಿ ಕಾರ್ಯಕ್ರಮ ಯೋಜಿಸಿದ್ದಾರೆ‌. ಕಾಂಗ್ರೆಸ್ ಶಕ್ತಿ ಮತ್ತು ಇತಿಹಾಸದ ಮುಂದೆ ಬೇರೆಯವರದು ಏನು ಇಲ್ಲ" ಎಂದು ತಿಳಿಸಿದರು.


"ಪಕ್ಷದ ಪ್ರತಿಯೊಬ್ಬರಿಗೂ ಗುರುತರವಾದ ಜವಾಬ್ದಾರಿ ನೀಡಲಾಗುವುದು. ಪ್ರತಿಯೊಬ್ಬ ಶಾಸಕನಿಗೆ ಒಬ್ಬೊಬ್ಬ ನಾಯಕರನ್ನು, ಪ್ರತಿ ಸಚಿವರಿಗೆ ಹಿರಿಯ ನಾಯಕರನ್ನು ಆಹ್ವಾನಿಸುವ ಜವಾಬ್ದಾರಿ ನೀಡಲಾಗುವುದು. ಪದಾಧಿಕಾರಿಗಳಿಗೆ ಪ್ರತಿಯೊಂದು ಕಮಿಟಿಯ ಉಸ್ತುವಾರಿ ಹಾಗೂ ಜವಾಬ್ದಾರಿ ನೀಡಲಾಗುವುದು" ಎಂದು ಹೇಳಿದರು.


"ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವಿಧಾನಸಭೆ ಅಧಿವೇಶನ ಮುಗಿದ ನಂತರ 20 ಅಥವಾ 21ನೇ ದಿನಾಂಕಗಳಂದು ದೊಡ್ಡ ಸಮುದಾಯ ಭವನದಲ್ಲಿ ಕಾರ್ಯಕರ್ತರ, ಸ್ಥಳೀಯ ಮಟ್ಟದ ನಾಯಕರ ಸಭೆ ಕರೆದು ಸಂಘಟನೆ ಮಾಡಬೇಕು. ಪ್ರತಿ ಸಭೆಯನ್ನು ಗಮನಿಸಲು ಉಸ್ತುವಾರಿಗಳನ್ನು ನೇಮಿಸಲಾಗುವುದು" ಎಂದರು.


"ಸಭೆಯ ವ್ಯವಸ್ಥೆಯನ್ನು ಸ್ಥಳೀಯ ಶಾಸಕರು ಅಥವಾ ಜಿಲ್ಲಾ ಉಸ್ತುವಾರಿ ಮಂತ್ರಿಗಳು ನೋಡಿಕೊಳ್ಳುತ್ತಾರೆ ಅವರು ವ್ಯವಸ್ಥೆ ಮಾಡದಿದ್ದರೆ ನಾನೇ ಕೆಪಿಸಿಸಿಯಿಂದ ಪದಾಧಿಕಾರಿಗಳನ್ನು ನೇಮಿಸಿ ವ್ಯವಸ್ಥೆ ಮಾಡುತ್ತೇನೆ ಏಕೆಂದರೆ ಇದು ನನ್ನ ಮೇಲಿರುವ ಅತ್ಯಂತ ದೊಡ್ಡ ಜವಾಬ್ದಾರಿ" ಎಂದರು.


"ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ  ಪ್ರಯಾಣದ ವೇಳೆಯಲ್ಲಿಯೇ ಊಟದ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮ ಮುಗಿದ ನಂತರ ಗಾಂಧೀಜಿಯವರು ಭೇಟಿ ನೀಡಿದ ಸ್ಥಳಗಳಿಗೆ ಹಾಗೂ ಸುವರ್ಣಸೌಧಕ್ಕೆ ಪ್ರವಾಸ ಮಾಡಬಹುದು. ಎಲ್ಲಾ ಕ್ಷೇತ್ರಗಳಿಗೂ ಉಸ್ತುವಾರಿಯನ್ನು ನೇಮಿಸಿರುತ್ತೇವೆ. ಅವರು ಪ್ರತಿಯೊಂದು ವರದಿಯನ್ನು ನನಗೆ ನೀಡುತ್ತಿರುತ್ತಾರೆ" ಎಂದು ಹೇಳಿದರು.


"ಜಿಲ್ಲಾ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಸದಸ್ಯರು,  ಆಶ್ರಯ ಸಮಿತಿ ಸೇರಿದಂತೆ ಯಾವ ಯಾವ ಸಮಿತಿಗಳಿಗೆ ಪಕ್ಷದಿಂದ ನೇಮಕ ಮಾಡಲಾಗಿದೆಯೋ ಅವರೆಲ್ಲರೂ ಕೂಡ ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಹಾಜರಾತಿ ಇರಬೇಕು. ಪಂಚಾಯಿತಿ ಹಾಲಿ, ಮಾಜಿ ಸದಸ್ಯರು, ಹಾಲು ಉತ್ಪಾದಕರ ಸಂಘ, ಎಪಿಎಂಸಿ, ಸಹಕಾರ ಸಂಘಗಳ ಸದಸ್ಯರು ಕಾರ್ಯಕ್ರಮಕ್ಕೆ ಬರಬೇಕು" ಎಂದರು.


"ಎರಡು ಮೂರು ದಿನದಲ್ಲಿ ವಾಹನಗಳಿಗೆ ಹಾಗೂ ಇತರ ವ್ಯವಸ್ಥೆಗೆ ಎಷ್ಟು ಹಣ ಖರ್ಚಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವರದಿ ನೀಡಬೇಕು" ಎಂದು ತಿಳಿಸಿದರು.


"ನಮ್ಮ ಸರ್ಕಾರದ ಅವಧಿಯೊಳಗೆ ರಾಜ್ಯದಾದ್ಯಂತ 100 ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡಲಾಗುವುದು. ಇದರ ಜವಾಬ್ದಾರಿಯನ್ನು ಶಾಸಕರು ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಅನೇಕ ಕಡೆ ಕಾರ್ಯಕರ್ತರೇ ಭೂಮಿ ಹಾಗೂ ಹಣವನ್ನು ನೀಡಲು ಮುಂದೆ ಬಂದಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಮಾಡಲು ಸಹಕಾರ ನೀಡದ ಸಚಿವರು ಹಾಗೂ ಶಾಸಕರು ಇದ್ದರೆ ಅವರ ಬಗ್ಗೆ ನನಗೆ ಪತ್ರ ಬರೆಯಿರಿ" ಎಂದು ತಿಳಿಸಿದರು.


"ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸತೀಶ್ ಜಾರಕಿಹೊಳಿ ಅವರು ಹಾಗೂ ಎಲ್ಲಾ ಪದಾಧಿಕಾರಿಗಳ ನೆರವಿನಿಂದ ಐತಿಹಾಸಿಕ ಕಾಂಗ್ರೆಸ್ ಭವನ ನಿರ್ಮಾಣವಾಗಿದೆ" ಎಂದರು.


"ಶೋಕಾಚರಣೆ ಇದ್ದ ಕಾರಣಕ್ಕೆ ಎಲ್ಲಾ ಪದಾಧಿಕಾರಿಗಳಿಗೆ ಔತಣಕೂಟ ಏರ್ಪಡಿಸಲು ಆಗಲಿಲ್ಲ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರೊಟ್ಟಿಗೆ ಔತಣಕೂಟ ಏರ್ಪಡಿಸಲಾಗುವುದು" ಎಂದರು.


ಮಾಧ್ಯಮಗೋಷ್ಠಿ ಮುಖ್ಯಾಂಶಗಳು:


ಸಭೆ ಬಳಿಕ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು:
"26ರಂದು ಪಕ್ಷದ ಕಾರ್ಯಕಾರಣಿ ಸಭೆ ಹಾಗೂ 27ರಂದು ಕಾರ್ಯಕರ್ತರ ಬೃಹತ್ ಸಭೆ ನಡೆಯಲಿದೆ. ಇದೇ ವೇಳೆ ರಾಜ್ಯದ ನೂರು ಕಡೆಗಳಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ನಿರ್ಮಾಣದ ಶಂಕುಸ್ಥಾಪನೆ ನೆರವೇರಲಿದೆ. ಈ ಎಲ್ಲಾ ಕಡೆಗಳನ್ನು ಜೂಮ್ ಮೂಲಕ ಸಂಪರ್ಕ ಮಾಡಲಾಗುವುದು. ಆ ಮೂಲಕ ಇತಿಹಾಸ ಪುಟ ಸೇರುವ ಕಾರ್ಯಕ್ರಮ ಮಾಡಲಾಗುತ್ತಿದೆ.


ಕಾರ್ಯಕ್ರಮ ನಡೆಯಲಿರುವ ಜಾಗ ವೀಕ್ಷಣೆ ಮಾಡಲು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸೋಮವಾರ ಹಾಗೂ ಮಂಗಳವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ.


ಈ ಕಾರ್ಯಕ್ರಮ ಆಯೋಜನೆಗೆ ವಿವಿಧ ಸಮಿತಿ ರಚಿಸಲಾಗಿದೆ. ಪಕ್ಷದ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗುತ್ತಿದೆ. ಮೈಸೂರು ದಸರಾ ವೈಭವದಂತೆ ಬೆಳಗಾವಿಯಲ್ಲಿ ಈ ಕಾರ್ಯಕ್ರಮದ ವೇಳೆ ಸಂಭ್ರಮದ ವಾತಾವರಣ, ದೀಪಾಲಂಕಾರ ಮಾಡಲಾಗುವುದು.


ಇದನ್ನೂ ಓದಿ: Sangeetha Sringeri: ಪ್ರಖ್ಯಾತ ಬಿಗ್‌ಬಾಸ್‌ ಸ್ಪರ್ಧಿ.. ನಟಿ ಸಂಗೀತಾ ಶೃಂಗೇರಿ‌ ಮದುವೆ ಆಗೋ ಹುಡುಗ ಯಾರು ಗೊತ್ತೇ? ಇವರೇ ನೋಡಿ ಆ ಲಕ್ಕಿ ಬಾಯ್..‌


ನಮ್ಮ ಪ್ರಧಾನ ಕಾರ್ಯದರ್ಶಿಗಳು ಬಂದ ನಂತರ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಲಿದ್ದಾರೆ."


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ