ಗೌರಿ ಲಂಕೇಶ್ ಹತ್ಯೆ ಆರೋಪಿ ಮಂಪರು ಪರೀಕ್ಷೆಗೆ ನ್ಯಾಯಾಲಯ ಅನುಮತಿ
ಆರೋಪಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ವಿಶೇಷ ತನಿಖಾ ತಂಡಕ್ಕೆ ನ್ಯಾಯಾಲಯ ಅನುಮತಿ ನೀಡಿದೆ.
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ವಿಶೇಷ ತನಿಖಾ ತಂಡಕ್ಕೆ ನ್ಯಾಯಾಲಯ ಅನುಮತಿ ನೀಡಿ, ಆತನ ನ್ಯಾಯಾಂಗ ಬಂಧನದ ಅವಧಿಯನ್ನು ಮಾರ್ಚ್ 26ರವರಗೆ ವಿಸ್ತರಿಸಿದೆ.
ಕಳೆದ ಮಾರ್ಚ್ 9ರಂದು ನವೀನ್ ಅಲಿಯಾಸ್ ಹೊಟ್ಟೆ ಮಂಜನನ್ನು ಮಂಪರು ಪರೀಕ್ಷೆಗೊಳಪಡಿಸಲು ಎಸ್ಐಟಿ ನ್ಯಾಯಾಲಯದ ಅನುಮತಿ ಕೋರಿತ್ತು. ಈ ಸಂಬಂಧ ಇಂದು ವಿಚಾರಣೆ ಆಲಿಸಿದ ನಗರದ 3ನೇ ಎಸಿಎಂಎಂ ನ್ಯಾಯಾಧೀಶ ವೆಂಕಣ್ಣ ಹೊಸಮನಿ ಮಂಪರು ಪರೀಕ್ಷೆಗೆ ಆದೇಶ ನೀಡಿದ್ದು, ತನಿಖೆ ನಡೆಸುವಂತೆ ಎಸ್ಐಟಿಗೆ ಸೂಚಿಸಿದ್ದಾರೆ.
ಮಂಪರು ಪರೀಕ್ಷೆಗೆ ಕೋರ್ಟ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಹೈದರಾಬಾದ್ ಅಥವಾ ಅಹಮದಾಬಾದ್ನ ಮಂಪರು ಪರೀಕ್ಷಾ ಕೇಂದ್ರದ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ, ಆತನನ್ನು ಪರೀಕ್ಷೆಗೆ ಕರೆದೊಯ್ಯಲಾಗುವುದು ಎಂದು ವಿಶೇಷ ತನಿಖಾ ತಂಡ(ಎಸ್ಐಟಿ) ತಿಳಿಸಿದೆ.