ವ್ಯಾಲೆಂಟೈನ್ಸ್ ಡೇ ದಿನದಂದು ಕುರಿ ಮತ್ತು ಆಡಿಗೆ ಕಂಕಣ ಭಾಗ್ಯ
ಬೆಂಗಳೂರು: ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಡಿಯಲ್ಲಿ (ಕರವೇ) ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಕುರಿ ಮತ್ತು ಆಡಿನ ನಡುವೆ ಮದುವೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇದೆ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಮಾತನಾಡಿ ಪ್ರೀತಿ ಎನ್ನುವುದು ಪ್ರತಿಯೊಬ್ಬರ ವೈಯಕ್ತಿಕ ಹಕ್ಕು ಅದನ್ನು ಯಾರು ಕೂಡಾ ನಿರಾಕರಿಸಲಾಗದು ಆದ್ದರಿಂದ ಕೇಂದ್ರ ಸರ್ಕಾರವು 'ಪ್ರೀತಿಗಾಗಿ ಒಂದು ದಿನ' ರಜೆ ನೀಡಬೇಕೆಂದು ಆಗ್ರಹಿಸಿದರು. ಅಲ್ಲದೆ ಸರ್ಕಾರ ಪ್ರೀತಿಸಿ ಮದುವೆಯಾದವರಿಗೆ ಸಹಾಯಧನ ನೀಡಬೇಕು ಎಂದು ಸರ್ಕಾರವನ್ನು ವಿನಂತಿಸಿಕೊಂಡರು.
ಇದೆ ಸಂದರ್ಭದಲ್ಲಿ ಆಡು ಮತ್ತು ಕುರಿಗಳು ಹೂವು ಮತ್ತು ಅರಿಶಿಣ ಕುಂಕುಮಗಳಿಂದ ಅಲಂಕರಿಸಲಾಗಿತ್ತು. ಏತನ್ಮಧ್ಯೆ, ವ್ಯಾಲೆಂಟೈನ್ಸ್ ಡೇ ವಿರೋಧಿಸಿ ರಾಷ್ಟ್ರದಾದ್ಯಂತ ಹಲವಾರು ಪ್ರತಿಭಟನೆಗಳು ಕೂಡಾ ನಡೆದಿವೆ.
ವ್ಯಾಲೆಂಟೈನ್ಸ್ ಡೇ ಹಿಂದಿನ ದಿನ ಇದರ ಆಚರಣೆಯನ್ನು ವಿರೋಧಿಸಲು ಭಾರತ್ ಹಿಂದೂ ಫ್ರಂಟ್ ಕಾರ್ಯಕರ್ತರು ಚೆನ್ನೈ ನಲ್ಲಿ ನಾಯಿ ಮತ್ತು ಕತ್ತೆಗಳ ನಡುವೆ ಮದುವೆ ಆಚರಣೆ ಮಾಡಿದ್ದು ಗಮನ ಸೆಳೆದಿತ್ತು ಆದರೆ ಪ್ರತಿಭಟನಾಕಾರನ್ನು ಚೆನ್ನೈ ನ ಪೊಲೀಸರು ಬಂಧಿಸಿದರು.