ಉಡುಪಿ: ಕೃಷಿಯೋಗ್ಯ ಭೂಮಿಯನ್ನು ಪಾಳು ಬಿಟ್ಟು ಸರ್ಕಾರದ ಸೌಲಭ್ಯ ಪಡೆಯುವ ಪ್ರವೃತ್ತಿಗೆ ಕಡಿವಾಣ ಹಾಕಲು ಚಿಂತನೆ ನಡೆಸುವುದಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ್ (BC Patil) ತಿಳಿಸಿದರು.


COMMERCIAL BREAK
SCROLL TO CONTINUE READING

ಉಡುಪಿ ಜಿಲ್ಲಾ ಕೃಷಿ ಪ್ರಗತಿ ಪರೀಶೀಲನಾ ಸಭೆ ನಡೆಸಿದ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ವರದಿಗಾರರೊಬ್ಬರು, ಕೆಲವಾರು ಕೃಷಿಕರು ತಮ್ಮ ಮಾಲೀಕತ್ವದ ಭೂಮಿಯಲ್ಲಿ ಕೃಷಿ ಮಾಡುತ್ತಿಲ್ಲ. ಆದರೂ ಪಹಣಿ ಮುಖಾಂತರ ಕೇಂದ್ರ - ರಾಜ್ಯ ಸರ್ಕಾರಗಳ ಸೌಲಭ್ಯ‌ ಪಡೆಯುತ್ತಿದ್ದಾರೆ ಎಂದು ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಚಿವರು, ಕೃಷಿಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸದೇ ಸರ್ಕಾರದ ಸೌಲಭ್ಯ ಪಡೆಯುವಂಥ ಪ್ರಕರಣಗಳಿದ್ದರೆ ಅದನ್ನು ಕೂಲಂಕುಷವಾಗಿ ಪರಿಶೀಲಿಸಿ ಅಂಥವರ ಸೌಲಭ್ಯ ಸ್ಥಗಿತಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ತಿಳಿಸಿದರು.


ಯಾವ ರೈತರು (Farmers) ಸಹ ಕೃಷಿಭೂಮಿಯನ್ನು ಪಾಳು ಬಿಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಕೆಲವರು ತಾವೇ ನೇರವಾಗಿ ಕೃಷಿ ಮಾಡದಿದ್ದರೂ ಬೇರೆಯವರಿಗೆ ಕೃಷಿ ಮಾಡಲು ಕೊಟ್ಟಿರುತ್ತಾರೆ ಎಂದು ವಿವರಿಸಿದರು.

ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ಕೃಷಿಕರು, ಕೃಷಿಕಾರ್ಮಿಕರು ಕೊರೋನಾವೈರಸ್ ಕೋವಿಡ್ 19 (Covid-19) ಸೋಂಕು ಪ್ರಕರಣಗಳ ನಂತರ ತಮ್ಮತಮ್ಮ ಗ್ರಾಮಗಳಿಗೆ ಹಿಂದಿರುಗಿದ್ದಾರೆ. ಅವರು ಇನ್ನು ಮುಂದೆ ತಮ್ಮ ಹೊಲಗಳಲ್ಲಿ ಕೃಷಿ ಚಟುವಟಿಕೆ ಆರಂಭಿಸುತ್ತಾರೆ ಎಂದು ಪ್ರತಿಪಾದಿಸಿದರು.


ನಗರ ಪ್ರದೇಶಗಳಲ್ಲಿದ್ದ ಹಳ್ಳಿಗಳ ಯುವಕರನೇಕರು ಕೃಷಿಕಾರ್ಯ ಮಾಡುವ ದೃಢ ಸಂಕಲ್ಪ ಮಾಡಿದ್ದಾರೆ. ಇನ್ನು ಕೃಷಿಕಾಯಕಕ್ಕೆ ಮೌಲ್ಯ ಎಂಬುದನ್ನು ಅರಿತಿದ್ಸಾರೆ. ಈಗ ಕೃಷಿ ಸ್ವರ್ಣಯುಗ ಮತ್ತೆ ಆರಂಭವಾಗಿದೆ ಎಂದು ಅಭಿಪ್ರಾಯಪಟ್ಟರು.


ಉಡುಪಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಚಟುವಟಿಕೆಗಳನ್ನು ನಡೆಸುವುದಕ್ಕೆ ಬೇಕಾದ ಎಲ್ಲ ಪೂರ್ವ ಸಿದ್ಧತೆ ಗಳೂ ಆಗಿವೆ. ಬಿತ್ತನೆಬೀಜ - ಗೊಬ್ಬರಗಳಿಗೆ ಅಭಾವ ಉಂಟಾಗುವುದಿಲ್ಲ. ರೈತರು ನಿಶ್ಚಿಂತೆಯಿಂದ ಕೃಷಿಕಾರ್ಯಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.


ಚಿತ್ರೋದ್ಯಮ ಚಟುವಟಿಕೆಗಳಿಗೆ ಲಾಕ್ ಡೌನ್ ನಿಂದ ವಿನಾಯ್ತಿ ನೀಡುವ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಚಿತ್ರ ನಿರ್ಮಾಣ ಚಟುವಟಿಕೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಂತಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡುತ್ತಿವೆ. ಸದ್ಯದಲ್ಲಿಯೇ ಚಿತ್ರರಂಗದ ಚಟುವಟಿಕೆಗಳಿಗೂ ಅವಕಾಶವಾಗಬಹುದು ಎಂದು ಬಿ.ಸಿ. ಪಾಟೀಲ್ ಆಶಿಸಿದರು.


ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿರುವುದನ್ನು ಸಮರ್ಥಿಸಿಕೊಂಡ ಸರ್ಕಾರ, ಕುಡಿತದ ಪ್ರವೃತ್ತಿ ಇಂದು ನಿನ್ನೆಯದಲ್ಲ.‌ ಸಾವಿರಾರು ವರ್ಷಗಳಿಂದ ಇದೆ. ಅದರಿಂದ ಸರ್ಕಾರಕ್ಕೆ ತೆರಿಗೆಯೂ ಇದೆ. ಮದ್ಯ ಖರೀದಿ ಮಾಡುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದರಿಂದ ಸೋಂಕು ಹರಡುವ ಅಪಾಯವಿಲ್ಲ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.