ರಾಷ್ಟ್ರಕವಿ ಕುವೆಂಪು ಜನ್ಮದಿನದ ಸ್ಮರಣಾರ್ಥ ಗೂಗಲ್ ಡೂಡಲ್ ನಮನ
ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಸ್ಮರಣಾರ್ಥವಾಗಿ `ಗೂಗಲ್` ಡೂಡಲ್ ಗೌರವ ಸಲ್ಲಿಸಿದೆ.
ಬೆಂಗಳೂರು: ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಚಿಂತಕ, ರಾಷ್ಟ್ರಕವಿ ಪುರಸ್ಕೃತ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ಅವರ ಜನ್ಮದಿನದ ಸ್ಮರಣಾರ್ಥವಾಗಿ ಗೂಗಲ್ ಡೂಡಲ್ ನಮನ ಸಲ್ಲಿಸಿದೆ.
ವಿಶ್ವ ಮಾನವ ಸಂದೇಶವನ್ನು ನೀಡಿದವರು, ಕನ್ನಡದ ಎರಡನೇ 'ರಾಷ್ಟ್ರಕವಿ', ಜ್ಞಾನಪೀಠ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕನ್ನಡಕ್ಕೆ ಮೊದಲ ಬಾರಿಗೆ ತಂದುಕೊಟ್ಟ, ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡ ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ ಕುವೆಂಪು ಅವರ ಜನ್ಮದಿನವಿಂದು. ಅವರ ಜನ್ಮದಿನವನ್ನು ಗೂಗಲ್ ಡೂಡಲ್ ಆಚರಿಸುತ್ತಿದೆ.
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ 29, 1904ರಂದು ಜನಿಸಿದರು. ಅವರ ತಂದೆ ವೆಂಕಟಪ್ಪಗೌಡ, ತಾಯಿ ಸೀತಮ್ಮ. ಕುವೆಂಪು ಅವರ ಬಾಲ್ಯ ಅವರ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಕಳೆಯಿತು.
ಇವರ ಆರಂಭಿಕ ಶಿಕ್ಷಣ ಕೂಲಿಮಠದಲ್ಲಿ ನಡೆದರೆ, ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ಹಾಗೂ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣ ನಡೆಯಿತು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಮತ್ತು ಕನ್ನಡದಲ್ಲಿ ಎಂ.ಎ ಪದವಿಯನ್ನು ಪಡೆದರು.
ಕುವೆಂಪು ಬರಿ ಕವಿಯಲ್ಲ, ಅವರೊಬ್ಬ ರಸಋಷಿ. ಅವರ 'ಶ್ರೀ ರಾಮಾಯಣ ದರ್ಶನಂ' ಒಂದು ಮಹಾಕಾವ್ಯ. ಅಲ್ಲದೆ ಕುವೆಂಪು ಅವರ 'ಕಾನೂರು ಹೆಗ್ಗಡತಿ' ಹಾಗೂ 'ಮಲೆಗಳಲ್ಲಿ ಮದುಮಗಳು' ಜಗತ್ತಿನ ಮಹಾನ್ ಕಾದಂಬರಿಗಳ ಜೊತೆ ಕನ್ನಡದ ಕಾದಂಬರಿಗಳು ಸಹ ತಲೆಎತ್ತಿ ನಿಲ್ಲುವಂತೆ ಮಾಡಿದೆ. 1947 ರಲ್ಲಿ ಮೂಡಿಬಂದ 'ಬೆರಳ್ ಗೆ ಕೊರಳ್' ಎಂಬ ನಾಟಕ ಒಂದು ಅತ್ಯದ್ಭುತ ನಾಟಕವಾಗಿದೆ.
ಕುವೆಂಪು ಅವರು ಮಹಾಕಾವ್ಯ, ಖಂಡಕಾವ್ಯ, ಕವನ ಸಂಕಲನ, ಕಥಾಸಂಕಲನ, ಕಾದಂಬರಿಗಳು, ಪ್ರಬಂಧ, ವಿಮರ್ಶೆ, ಆತ್ಮಕತೆ, ಜೀವನ ಚರಿತ್ರೆ, ಭಾಷಣ-ಲೇಖನ, ಶಿಶು ಸಾಹಿತ್ಯ ಹೀಗೆ ಹಲವಾರು ರೀತಿಯಲ್ಲಿ ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ವಿರಚಿತ 'ಜಯ ಭಾರತ ಜನನಿಯ ತನುಜಾತೆ| ಜಯ ಹೇ ಕರ್ನಾಟಕ ಮಾತೆ' ಗೀತೆಯನ್ನು ಕರ್ನಾಟಕದ ನಾಡಗೀತೆಯನ್ನಾಗಿ ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕುವೆಂಪು ಈ ಪದ್ಯವನ್ನು 1924ರಲ್ಲಿ 'ಕಿಶೋರಚಂದ್ರವಾಣಿ' ಎಂಬ ಕಾವ್ಯನಾಮದಡಿ ಬರೆದರು. 2004ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಮಾಡಲು ನಿರ್ಧರಿಸಿತು.
* ಪುಟ್ಟಪ್ಪನವರಂತೆ ಕಾವ್ಯವನ್ನು ಯಾರು ಬರೆಯಬಲ್ಲರು? ಅವರ ಕಾವ್ಯದಲ್ಲಿ ಕಾಣುವ ಮೃದು ಮಧುರ ಪದಬಂಧ, ಬಗೆಯ ಭಾವದ ಐಸಿರಿ, ಭಾವದ ರಸಪ್ರವಾಹ, ಕಾವ್ಯಾಲಂಕಾರ, ಉಕ್ತಿ ಚಮತ್ಕಾರಗಳ ವೈಭವವು ಸಹೃದಯರನ್ನು ರೋಮಾಂಚನಗೊಳಿಸಿ ಸಂತೋಷದ ಕಣ್ಣೀರನ್ನು ಕೋಡಿವರಿಸುತ್ತದೆ. ಪಾಶ್ಚಿಮಾತ್ಯ ಕಾವ್ಯ ವಿಮರ್ಶಕ ಮಾನದಂಡದಿಂದ ಅಳೆದು ನೋಡಿದರೂ ಪುಟ್ಟಪ್ಪನವರು ಮಹಾಕವಿಗಳಾಗಿ ತೇರ್ಗಡೆ ಹೊಂದುತ್ತಾರೆ- ಡಿ.ಎಲ್.ನರಸಿಂಹಾಚಾರ್
* ಐದು ದಶಕಗಳಿಂದ ಶ್ರೀ ಕುವೆಂಪು ಸಾಹಿತ್ಯ ಕನ್ನಡ ನಾಡಿನ ಜನಮನವನ್ನು ತಣಿಸುತ್ತಾ, ಹುರಿದುಂಬಿಸುತ್ತಾ, ಹಸನುಗೊಳಿಸುತ್ತಿದೆ, ಅವರ ವಿಚಾರಶಕ್ತಿಯನ್ನು ಕೆರಳಿಸುತ್ತಾ, ನಿರಂಕುಶ ಮತಿತ್ವದ ಅವಶ್ಯಕತೆ, ಅನಿವಾರ್ಯತೆಯನ್ನು ನೆನಪಿಗೆ ತಂದುಕೊಡುತ್ತಿದೆ, ಅವರ ಬದುಕಿಗೊಂದು ತಾರಕಮಂತ್ರವಾಗಿ ಧ್ರುವತಾರೆಯಾಗಿ ಸಂಜೀವನಶಕ್ತಿಯಾಗಿ ಅದನ್ನು ತಿದ್ದುತ್ತಿದೆ, ಉನ್ನತಗೊಳಿಸುತ್ತಿದೆ, ಸಚೇತನಗೊಳಿಸುತ್ತಿದೆ, ಪುಷ್ಟಿಗೊಳಿಸುತ್ತಿದೆ. ಸಾವಿರಾರು ವರ್ಷಗಳಿಂದ ಭಾರತೀಯ ಧರ್ಮದ ಸುತ್ತ ಬೆಳೆದುಕೊಂಡು, ಅದರ ಮೂಲ ಸ್ವರೂಪವನ್ನು ಮರೆಸಿರುವ ಮೌಢ್ಯಗಳಿಗೆ ಶುಷ್ಕ ಚಾರಗಳಿಗೆ ಕಂದಾಚಾರದ ಸಂಪ್ರದಾಯಗಳಿಗೆ ಅಗ್ನಿ ಸಂಸ್ಕಾರ ಮಾಡುವಲ್ಲಿ, ಜಾತೀಯತೆಯನ್ನು ಸಾಧ್ಯವಾದಷ್ಟು ತೊಡೆಯುವಲ್ಲಿ, ಪುರೋಹಿತ ಹಾಗೂ ಸಾಮ್ರಾಜ್ಯಶಾಹಿಯನ್ನು ಅಂತ್ಯಗೊಳಿಸುವಲ್ಲಿ ಅದು ಯಶಸ್ವಿಯಾಗಿದೆ. ಭಾರತೀಯರ ಸುಖ ದುಃಖ, ಆಶೆ ಆಕಾಂಕ್ಷೆ, ಕನಸು ನನಸು ಗಳನ್ನು ಪ್ರತಿಬಿಂಬಿಸುವ ಮೂಲಕ ಅವರ ನಾಡಿಯನ್ನು ಮಿಡಿದಿದೆ- ದೇ.ಜ.ಗೌ
* ಯುಗದ ಕವಿಗೆ
ಜಗದ ಕವಿಗೆ
ಶ್ರೀ ರಾಮಾಯಣ ದರ್ಶನದಿಂದಲೇ ಕೈ
ಮುಗಿದ ಕವಿಗೆ – ಮಣಿಯದವರು ಯಾರು?
ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದ
ಕವನ ತತಿಗೆ ತಣಿಯದವರು ಆರು?
ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ
ಕವಿಯ ಜತೆಗೆ ಕುಣಿಯದವರು ಆರು? - ಎಂಬ ದ.ರಾ.ಬೇಂದ್ರೆಯವರ ನುಡಿಗಳು ಅದೆಷ್ಟು ಸತ್ಯ ಅಲ್ಲವೇ...