ಜನಾರ್ಧನ ರೆಡ್ಡಿ ವಿಚಾರಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ: ಸಚಿವ ಡಿ.ಕೆ.ಶಿವಕುಮಾರ್
ತನಿಖೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ. ಅಷ್ಟಕ್ಕೂ ಈ ರೀತಿ ತನಿಖೆ ಮಾಡಿಸುವ ಅಗತ್ಯವೂ ಸರ್ಕಾರಕ್ಕಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು: ಜನಾರ್ಧನ ರೆಡ್ಡಿ ಡೀಲ್ ಪ್ರಕರಣದ ತನಿಖೆಯಲ್ಲಿ ಸರಕಾರದ ಹಸ್ತಕ್ಷೇಪ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇಂದು ಎಎನ್ಐ ಜೊತೆ ಮಾತನಾಡಿರುವ ಅವರು, ಜನಾರ್ಧನ್ ರೆಡ್ಡಿ ಅವರು ಆರೋಪಿಯಾಗಿರುವ ಆಂಬಿಡೆಂಟ್ ಚಿಟ್ ಫಂಡ್ ಡೀಲ್ ಪ್ರಕರಣದ ಬಗ್ಗೆ ಪೊಲೀಸರು ಬಹಳ ದಿನಗಳಿಂದ ತನಿಖೆ ನಡೆಸುತ್ತಿದ್ದಾರೆ. ಈ ತನಿಖೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ. ಅಷ್ಟಕ್ಕೂ ಈ ರೀತಿ ತನಿಖೆ ಮಾಡಿಸುವ ಅಗತ್ಯವೂ ಸರ್ಕಾರಕ್ಕಿಲ್ಲ. ಜನಾರ್ಧನ್ ರೆಡ್ಡಿ ಬಿಜೆಪಿ ನಾಯಕ ಎಂದು ನಾವು ಹೇಳುವುದಿಲ್ಲ. ಕಾನೂನು ಇದೆ, ಕ್ರಮ ಕೈಗೊಳ್ಳಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಟಿಪ್ಪು ಜಯಂತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಟಿಪ್ಪು ಸುಲ್ತಾನ್ ಗೆ ಅತಿ ದೊಡ್ಡ ಇತಿಹಾಸವಿದೆ. ಹಾಗಾಗಿ ಟಿಪ್ಪು ಜಯಂತಿ ಆಚರಣೆಯಲ್ಲಿ ತಪ್ಪಿಲ್ಲ. ಬಿಜೆಪಿ ತನ್ನದೇ ರಾಜಕೀಯ ನೀತಿ ಅನುಸರಿಸುತ್ತಿದೆ. ಹಿಂದೂಗಳು ಮತ್ತು ಅಲ್ಪಸಂಖ್ಯಾತರ ನಡುವೆ ತಾರತಮ್ಯ ಮೂಡುವಂತೆ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಡಿಕೆಶಿ ಆರೋಪಿಸಿದರು.
ಇದೇ ನವೆಂಬರ್ 10ರಂದು ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ಮುಂದಾಗಿದೆ. ಆದರೆ ಜಯಂತಿ ಆಚರಣೆ ಸಂಬಂಧ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಕೇವಲ ಸಭಾ ಕಾರ್ಯಕ್ರಮಗಳಿಗೆ ಸರ್ಕಾರ ಅವಕಾಶ ನೀಡಿದ್ದು, ಮೆರವಣಿಗೆಯನ್ನು ನಿಷೇಧಿಸಿದೆ.