ರೈತರ ಸಮಸ್ಯೆ ನಿವಾರಣೆಗೆ ಸರ್ಕಾರ ಬದ್ಧ: ರಾಜ್ಯಪಾಲ ವಜೂಭಾಯ್ ವಾಲಾ
ಸೋಮವಾರ ಆರಂಭವಾದ ಸಮ್ಮಿಶ್ರ ಸರ್ಕಾರದ ಚೊಚ್ಚಲ ಅಧಿವೇಶನದಲ್ಲಿಲ್ಲಿ ಎರಡೂ ಸದನದ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲ ವಜೂಭಾಯ್ ವಾಲಾ ಮಾತನಾಡಿದರು.
ಬೆಂಗಳೂರು: ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯವಿಲ್ಲ. ರೈತರ ಸಮಸ್ಯೆಗೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ರಾಜ್ಯಪಾಲ ವಜೂಭಾಯ್ ವಾಲಾ ಹೇಳಿದರು.
ಸೋಮವಾರ ಆರಂಭವಾದ ಸಮ್ಮಿಶ್ರ ಸರ್ಕಾರದ ಚೊಚ್ಚಲ ಅಧಿವೇಶನದಲ್ಲಿಲ್ಲಿ ಎರಡೂ ಸದನದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತರ, ಹಿಂದುಳಿದ, ಶೋಷಿತರ, ಮಹಿಳೆಯರ ಅಭಿವೃದ್ಧಿಗೆ ಕಟಿ ಬದ್ಧವಾಗಿದೆ. ಜನರ ಸಮಸ್ಯೆ ನಿವಾರಣೆಗೆ ಸಿದ್ಧವಾಗಿದೆ ಎಂದು ಹೇಳಿದರು.
ಸುಮಾರು 19 ಪುಟಗಳ ಸುದೀರ್ಘ ಭಾಷಣ ಮಾಡಿದ ರಾಜ್ಯಪಾಲರು, ಹಿಂದಿನ ಸರ್ಕಾರ ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಜಾರಿಗೆ ತರುವುದಾಗಿ ಹೇಳಿದ್ದರ ಬಗ್ಗೆ ಪ್ರಸ್ತಾಪಿಸುತ್ತಾ, ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯ ವಿಧಾನಗಳು ಹೇಗೆ, ಅದರಿಂದ ಇಲ್ಲಿಯ ರೈತರಿಗೆ ಹೇಗೆ ಉಪಯೋಗವಾಗುತ್ತದೆ, ಹೇಗೆ ಜಾರಿಗೆ ತರಲಾಗುತ್ತದೆ ಎಂಬ ಬಗ್ಗೆ ಹೆಚ್ಚಿನ ಸ್ಪಷ್ಟತೆ ಬೇಕು ಎಂದು ಹೇಳಿದರು.
ರೈತರ ಬೆಳೆ ಸಾಲ ಮನ್ನಾ ಬಗ್ಗೆ ಯಾವುದೇ ನೇರ ಮಾತುಗಳನ್ನಾಡದ ರಾಜ್ಯಪಾಲರು, ಸಾಲಮನ್ನಾ ಬಗ್ಗೆ ಬಜೆಟ್ ವರೆಗೆ ಕಾಯುವಂತೆ ಹೇಳಿದರು. ಮುಂದುವರೆದು, ನೀರಾವರಿ ಯೋಜನೆಗಳಿಗೆ ಬೇಕಾದ ಎಲ್ಲಾ ನೆರವು ನೀಡಲಾಗುವುದು, ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮ ಮುಂದುವರೆಸಲಿದ್ದು, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ, ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆಗಳನ್ನು ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ ಮೂಲಕ ಆಹಾರ ಭದ್ರತೆಗೆ ಒತ್ತು ನೀಡಲಾಗುವುದು. ಕೆರೆ ತುಂಬಿಸುವ ಯೋಜನೆ, ಪ್ರವಾಹ ಪರಿಸ್ಥಿತಿ ಎದುರಿಸಲು ಮುಂಜಾಗ್ರತ ಕ್ರಮ, ಪ್ಲಾಸ್ಟಿಕ್ ನಿಯಂತ್ರಣಕ್ಕೆ ನಿಯಮ ರೂಪಣೆ, ಹಿಂದುಳಿದ ವರ್ಗಗಳ ಉದ್ಯೋಗಕ್ಕಾಗಿ ಕ್ರಮ, ಸಂಚಾರ ದಟ್ಟಣೆ, ಕುಡಿಯುವ ನೀರಿನ ವ್ಯವಸ್ಥೆ, ಬೆಂಗಳೂರು ಮೆಟ್ರೊ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದರೊಂದಿಗೆ ಸೈಬರ್ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ಯೋಜನೆ ರೂಪಿಸಲಾಗುವುದು ಎಂದು ವಜೂಭಾಯ್ ವಾಲಾ ಹೇಳಿದರು.
ಜುಲೈ 5 ರಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಮ್ಮಿಶ್ರ ಸರಾಕರದ ಬಜೆಟ್ ಮದಿಸಲಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಇಂದಿನ ಭಾಷಣ ಮಹತ್ವ ಪಡೆದುಕೊಂಡಿತು. ಇಂದಿನಿಂದ ಆರಂಭವಾಗಿರುವ ನೂತನ ಸರ್ಕಾರದ ಮೊದಲ ಅಧಿವೇಶನ ಮುಂದಿನ 10 ದಿನಗಳವರೆಗೆ ನಡೆಯಲಿದೆ.