ಬೆಂಗಳೂರು: ಮೆಟ್ರೋ ಹಾಗೂ ಬಿಎಂಟಿಸಿ ನಡುವೆ ಸಂಚರಿಸಲು ಕಾಮನ್‌ಫೇರ್‌ ಕಾರ್ಡ್‌ ಪರಿಚಯಿಸಲು ಚಿಂತಿಸಿದ್ದು, ಉಪಚುನಾವಣೆ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.


COMMERCIAL BREAK
SCROLL TO CONTINUE READING

ಬಿಎಂ‌ಆರ್‌ಸಿಎಲ್‌ನ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಿತ್ಯ ಮೆಟ್ರೋದಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದು, ಬೋಗಿಗಳ ಸಂಖ್ಯೆ ಹಂತ ಹಂತವಾಗಿ ಹೆಚ್ಚಾಗಿ ಪ್ರಯಾಣಿಕರ ಸಂಖ್ಯೆ ದ್ವಿಗುಣವಾಗಲಿದೆ ಎಂದರು. ಬಿಎಂಟಿಸಿ ಹಾಗೂ‌ ಮೆಟ್ರೋನಲ್ಲಿ ಸಂಚರಿಸಲು ಒಂದೇ ಕಾರ್ಡ್‌ ಪರಿಚಯಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಸಂಬಂಧ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡಲಾಗುವುದು ಎಂದರು. 


ಜೊತೆಗೆ, ಬಿಎಂಟಿಸಿ, ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಡಿಎ, ಮೆಟ್ರೋ ಎಲ್ಲ ಮೆಟ್ರೋ ಪಾಲಿಟಿಕ್ ನಿಗಮಗಳ ಸಮನ್ವಯತೆ ಕಾಪಾಡಲು ಕ್ರಮ ಕೈಗೊಳ್ಳಲು ಚಿಂತಿಸಲಾಗಿದೆ ಎಂದು ಅವರು ತಿಳಿಸಿದರು.


ಮೆಟ್ರೋ ನಿಗಮದಿಂದ ತಿಂಗಳಿಗೆ 30 ಕೋಟಿ ರೂ. ಆದಾಯ ಬರುತ್ತಿದ್ದು, 24 ಕೋಟಿ ರೂ. ವೆಚ್ಚವಾಗುತ್ತಿದೆ.‌ ಸೆಕ್ಯೂರಿಟಿ, ಟಿಕೆಟ್‌ ವಿತರಕರು ಸೇರಿದಂತೆ ಅನಗತ್ಯ ಮಾನವಸಂಪನ್ಮೂಲ ಬಳಕೆಗೆ ಕಡಿವಾಣ ಹಾಕಿ, ತಿಂಗಳಿಗೆ ಕನಿಷ್ಠ 5 ಕೋಟಿ ರೂ. ವೆಚ್ಚ ಕಡಿಮೆ ಮಾಡಲು ಸೂಚಿಸಿದ್ದೇನೆ ಎಂದರು. 


ಮೆಟ್ರೋ ಎರಡನೇ ಹಂತ 2020 ರವೇಳೆಗೆ ಮೈಸೂರು ರಸ್ತೆ, ತುಮಕೂರು ರಸ್ತೆ ಸಂಪೂರ್ಣವಾಗಲಿದೆ. ವೈಟ್‌ಫೀಲ್ಡ್‌, ಆರ್‌ವಿ ರಸ್ತೆ, ಬಿಮ್ಮಸಂದ್ರ ಮಾರ್ಗವು 2021ಕ್ಕೆ ಪೂರ್ಣಗೊಂಡರೆ, ಗೊಟ್ಟಿಗೆರೆ , ನಾಗವಾರ ಮಾರ್ಗ 2023 ಕ್ಕೆ ಮುಗಿಯಲಿದೆ. ಈ ಹಂತಕ್ಕೆ 26,405 ಕೋಟಿ ರೂ. ವೆಚ್ಚವಾಗಲಿದೆ. ‌ಆದರೆ ಪೂರ್ಣಗೊಳ್ಳುವ ಒಳಗಾಗಿ 32 ಸಾವಿರ ಕೋಟಿರೂ.ಗೆ ತಲುಪಬಹುದು ಎಂದರು. 


ಏರ್‌ಪೋರ್ಟ್‌ ಮಾರ್ಗದ ಮೆಟ್ರೋ ನಿರ್ಮಾಣದ ವಿಚಾರ ಇನ್ನು 15 ದಿನದೊಳಗೆ ಸಚಿವ ಸಂಪುಟಕ್ಕೆ ತೆಗೆದುಕೊಂಡು ಹೋಗಲಿದ್ದೇವೆ ಎಂದು ಮಾಹಿತಿ ನೀಡಿದರು.