ರೈತರ ಸಾಲ ಮನ್ನಾ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಕೆ.ಎಸ್.ಈಶ್ವರಪ್ಪ
ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಜುಲೈ 5 ರಂದು ಮಂಡಿಸಲಿರುವ ಬಜೆಟ್'ನಲ್ಲಿ ರೈತರ ಸಾಲ ಕುರಿತು ಘೋಷಣೆ ಮಾಡಲೇಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಉಪ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲ ವಜೂಭಾಯ್ ವಾಲಾ ಅವರು ವಿಧಾನಸಭೆ ಅಧಿವೇಶನದ ಆರಂಭಿಕ ಭಾಷಣದಲ್ಲಿ ರೈತರ ಸಾಲ ಮನಾ ಬಗ್ಗೆ ಯಾವುದೇ ಮಾತುಗಳನ್ನಾಡದೇ ಇರುವುದು ಸಾಲ ಮನ್ನಾ ಬಗ್ಗೆ ರೈತರ ನಿರೀಕ್ಷೆಯನ್ನು ಹುಸಿ ಮಾಡಿದೆ. ಈ ಬಗ್ಗೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಬಜೆಟ್'ನಲ್ಲಿ ಸಾಲ ಮನ್ನಾ ಮಾಡಲೇಬೇಕು. ಇಲ್ಲವಾದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ಆರಂಭಿಸಲಿದೆ ಎಂದು ಹೇಳಿದರು.
ಈಗಾಗಲೇ ರೈತರ ಸಾಲ ಮನ್ನಾ ಬಗ್ಗೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಆರಂಭದಲ್ಲಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಮೈತ್ರಿ ಸರ್ಕಾರಕ್ಕೆ ಈ ವಿಚಾರ ನುಂಗಲಾರದ ತುತ್ತಾಗಿದೆ. ಇದೀಗ ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ರಾಜ್ಯದ ಖಜಾನೆಯಲ್ಲಿ ಹಣ ಇರಲಿ, ಇಲ್ಲದಿರಲಿ ರೈತರ ಸಾಲ ಮನ್ನಾ ಮಾಡಲೇಬೇಕು ಎಂದು ಪಟ್ಟು ಹಿಡಿದಿದೆ.