ಚಿಕ್ಕಮಗಳೂರು: ತುಮಕೂರು ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಕರೆದೊಯ್ಯಲಾಗುತ್ತಿದ್ದು, ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಶೃಂಗೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಹೆಚ್ಚಿನ ಚಿಕಿತ್ಸೆಗೆ ಚೆನ್ನೈ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತೀರ್ಮಾನ ಮಾಡಲಾಗಿದೆ ಎಂದರು.


ಸಿದ್ದಗಂಗಾ ಶ್ರೀಗಳಿಗೆ ಹಲವಾರು ವೈದ್ಯರು ಹಾಗೂ ತಜ್ಞರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರ ಆಸ್ಪತ್ರೆಯ ವೆಚ್ಚವನ್ನು ಭರಿಸಲಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸರಿಗೆ ಎಲ್ಲಾ ರೀತಿಯ ಸಹಕಾರಕ್ಕೆ ಸೂಚಿಸಿದ್ದೇನೆ ಎಂದಿದ್ದಾರೆ.


ಬುಧವಾರ ರಾತ್ರಿ 9.30ರ ಸುಮಾರಿಗೆ ಹಳೇಮಠದಲ್ಲಿ ಪೂಜೆ ನೆರವೇರಿಸಿ ಪ್ರಸಾದ ಸೇವಿಸಿ ವಿಶ್ರಾಂತಿ ಪಡೆಯುವ ವೇಳೆ ಶ್ರೀಗಳಿಗೆ ಜ್ವರ, ಹೃದಯ ಬಡಿತ ಕಾಣಿಸಿಕೊಂಡಿತು. ಇದರಿಂದ ಮಠದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ತಕ್ಷಣ ಶ್ರೀಗಳ ಆರೋಗ್ಯ ನೋಡಿಕೊಳ್ಳುವ ಡಾ.ಪರಮೇಶ್ವರ್‌ ಮಠಕ್ಕೆ ಬಂದು ಶ್ರೀಗಳ ತಪಾಸಣೆ ನಡೆಸಿದರು. ನಂತರ ಬಿಜಿಎಸ್‌ ವೈದ್ಯ ಡಾ.ರವೀಂದ್ರ ಮತ್ತು ಡಾ.ವೆಂಕಟರಮಣ ಅವರು ಆಗಮಿಸಿ ಮಧ್ಯರಾತ್ರಿ 2.30ರ ವರೆಗೆ ಸಿದ್ಧಗಂಗಾ ಮಠದಲ್ಲಿ ಚಿಕಿತ್ಸೆ ನೀಡಿದ್ದರು. ಬಳಿಕ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು.


ಕಳೆದ ಶನಿವಾರ ಜ್ವರದಿಂದ ಬಳಲಿದ ಶ್ರೀಗಳನ್ನು ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ರಕ್ತದಲ್ಲಿ ಸೋಂಕು, ಪಿತ್ತನಾಳ ಹಾಗೂ ಪಿತ್ತ ಕೋಶದಲ್ಲಿ ಸೋಂಕು ಕಂಡು ಬಂದಿದ್ದರಿಂದ ಸ್ಟೆಂಟ್‌ ಅಳವಡಿಸಿ ಚಿಕಿತ್ಸೆ ನೀಡಿ ಸೋಮವಾರ ಶ್ರೀಗಳನ್ನು ಮಠಕ್ಕೆ ಕಳುಹಿಸಲಾಗಿತ್ತು.