ಬೆಂಗಳೂರು: ಇನ್ನೂ ಮುಂದೆ ಸರ್ಕಾರವೇ ರೈತರ ಮನೆ ಬಾಗಿಲಿಗೆ ತೆರಳಿ ಸಲಹೆ ಪಡೆಯಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮಗಳ ಸಮಸ್ಯೆ ಅರಿಯಲು ಗ್ರಾಮವಾಸ್ತವ್ಯ ಮಾಡಿದ್ದ ಕುಮಾರಸ್ವಾಮಿ ಅವರು, ಇದೀಗ ರೈತರ ಮೆನ್ ಬಾಗಿಲಿಗೆ ತೆರಳಲು ನಿರ್ಧರಿಸಿದ್ದಾರೆ. 


COMMERCIAL BREAK
SCROLL TO CONTINUE READING

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ನಡೆದ ರೈತರ ಮೊದಲ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, 'ರೈತನ ಮನೆಯಲ್ಲಿ ರಾಜ್ಯ ಸರ್ಕಾರ' ಎಂಬ ಘೋಷಣೆಯಡಿ ಗ್ರಾಮ ಭೇಟಿಗೆ ತೀರ್ಮಾನಿಸಲಾಗಿದೆ. 


ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ತಿಂಗಳಿಗೊಮ್ಮೆ ಒಂದು ಹಳ್ಳಿಯನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಹೊಲದಲ್ಲಿ ಸುತ್ತಮುತ್ತಲಿನ ರೈತರ ಸಭೆ ಕರೆದು ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸರ್ಕಾರ ಈ ಯೋಜನೆ ಹಮ್ಮಿಕೊಂಡಿದೆ. ಈ ಮೂಲಕ ರೈತರು ಮತ್ತು ಸರ್ಕಾರದ ನಡುವೆ ಯಾವುದೇ ಕಂದಕ ಮೂಡದಂತೆ ತಡೆದು, ಕೃಷಿಕರಿಗೆ ನೆಮ್ಮದಿಯ ಜೀವನ ಒದಗಿಸುವುದೇ ಸರ್ಕಾರದ ಉದ್ದೇಶ ಎಂದು ಹೇಳಿದರು.


ಮುಂದುವರೆದು ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ತಾತ್ಕಾಲಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬದಲು ಶಾಶ್ವತ ಪರಿಹಾರ ದೊರೆಯುವಂತೆ ನೋಡಿಕೊಳ್ಳಬೇಕು. ರೈತರಿಗೆ ಪ್ರಮುಖವಾಗಿ ಕೃಷಿಯ ಜೊತೆಗೆ ಉಪ ಕಸುಬು ಮಾಡಲು ಸರ್ಕಾರದಿಂದ ಸಹಾಯಧನ ನೀಡಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಗಿದೆ. ಉತ್ತಮ ಬಿತ್ತನೆ ಬೀಜ, ಮಾರುಕಟ್ಟೆ ವ್ಯವಸ್ಥೆ, ಬೆಳೆ ದಾಸ್ತಾನು ಮಾಡಲು ಗೋದಾಮು ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದ್ದಾರೆ. ರೈತರಿಗೆ ನೀರು ಮತ್ತು ವಿದ್ಯುತ್‌ ಸಮಸ್ಯೆ ಹೆಚ್ಚಾಗಿದ್ದು, ಅದನ್ನು ಪರಿಹರಿಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆಯೂ ಸರ್ಕಾರ ಹೆಚ್ಚಿನ ಗಮನ ಹರಿಸಲಿದೆ'' ಎಂದು ಕುಮಾರಸ್ವಾಮಿ ಹೇಳಿದರು.