ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸರ್ಕಾರಿ ಬಸ್‌ಗಳ ದರ ಶೇ. 12ರಷ್ಟು ಹೆಚ್ಚಳ
ನೂತನ ದರ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ಬಸ್‌ಗಳ ಪ್ರಯಾಣ ದರವನ್ನು ಶೇ. 12ರಷ್ಟು ಹೆಚ್ಚಳ ಮಾಡಲಾಗಿದ್ದು, ಮಂಗಳವಾರ ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬಂದಿದೆ. ಇದರಿಂದಾಗಿ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ತಟ್ಟಿದೆ.
ವಾಸ್ತವವಾಗಿ ಕೆಎಸ್‌ಆರ್‌ಟಿಸಿ ಪ್ರಯಾಣ ದರ ಪರಿಷ್ಕರಣೆ ಮಾಡಲು ಅನುಮತಿ ನೀಡುವಂತೆ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಸರ್ಕಾರ ಪರಿಶೀಲಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರಗಳನ್ನು ಶೇ. 12 ರಷ್ಟು ಹೆಚ್ಚಿಸಲು ಸರ್ಕಾರದ ಅನುಮೋದನೆ ನೀಡಿದೆ.
ಗಮನಾರ್ಹವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣ ದರವನ್ನು ಏರಿಕೆ ಮಾಡಲಾಗಿಲ್ಲ. ಉಳಿದ ಮೂರು ನಿಗಮಗಳಲ್ಲಿ ಪ್ರಯಾಣ ದರವನ್ನು ಹೆಚ್ಚಳ ಮಾಡಲು ಸರ್ಕಾರ ಅನುಮೋದಿಸಿದೆ.
ಕರ್ನಾಟಕ ಸರ್ಕಾರದ ಪರವಾಗಿ ಅಧೀನ ಕಾರ್ಯದರ್ಶಿ ಎಂ. ಸತ್ಯವತಿ ಈ ಕುರಿತು ಮಂಗಳವಾರ ಸಂಜೆ ಅಧಿಕೃತ ಆದೇಶ ಹೊರಡಿಸಿದ್ದು, ಸರ್ಕಾರದ ಆದೇಶದ ಪ್ರಕಾರ 100 ರೂ.ಗೆ 12 ರೂ. ಪ್ರಯಾಣ ದರ ಹೆಚ್ಚಳವಾಗಲಿದೆ.