ಬೆಂಗಳೂರು : ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಆಶಯವಾಗಿದೆ. ಈ ಸೌಲಭ್ಯ ನೀಡಲು ಕೇಂದ್ರ ಸರ್ಕಾರಕ್ಕೆ ಅವಕಾಶವಿದೆ ಅವರು ಜಾರಿಗೊಳಿಸಲು ದಿಟ್ಟ ಹೆಜ್ಜೆ ಇಟ್ಟರೆ, ನಾವು ಬೆಂಬಲಿಸಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


COMMERCIAL BREAK
SCROLL TO CONTINUE READING

ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಇಂದು ಸಂಜೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ  ಗೃಹಲಕ್ಷಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು, ಸಾಮಾಜಿಕ, ರಾಜಕೀಯ, ಆರ್ಥಿಕ ಅಸಮಾನತೆ, ಲಿಂಗ ತಾರತಮ್ಯಕ್ಕೆ ಐತಿಹಾಸಿಕ ಕಾರಣಗಳಿವೆ. ಇದನ್ನು ಸರಿಪಡಿಸಿದರೆ ಮಾತ್ರ  ಸಂವಿಧಾನ, ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ. ಅಕ್ಷರ ವಂಚಿತ ಶೂದ್ರರ ರೀತಿಯಲ್ಲಿಯೇ ಮಹಿಳೆಯರೂ ಕೂಡ ಶೋಷಿತರಾಗಿದ್ದರು. ಸಮಾಜದಲ್ಲಿ ಶೇಕಡಾ ಅರ್ಧದಷ್ಟಿರುವ ಮಹಿಳೆಯರು ಮುಖ್ಯ ವಾಹಿನಿಗೆ ಬರಬೇಕು. ಮಹಿಳೆಯರು ಸಬಲರಾಗಿರದ ದೇಶ, ರಾಜ್ಯ  ಕೂಡ ಸಬಲವಾಗಿರುವುದಿಲ್ಲ. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ, ಮೀಸಲಾತಿ ನೀಡಿದ ಹೆಮ್ಮೆ ನಮ್ಮದಾಗಿದೆ. ದೇಶದ ಲೋಕಸಭೆ, ಎಲ್ಲಾ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸುವ ಅವಕಾಶ ಕೇಂದ್ರ ಸರ್ಕಾರಕ್ಕೆ ಇದೆ. ಕೇಂದ್ರ ಈ ದಿಟ್ಟ ಹೆಜ್ಜೆ ಇರಿಸಿದರೆ ನಾವು ಬೆಂಬಲಿಸುತ್ತೇವೆ ಎಂದರು.


ಇದನ್ನೂ ಓದಿ: ಸದನದಿಂದ ಶಾಸಕರ ಅಮಾನತು : ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಹೆಚ್‌ಡಿಕೆ ಕಿಡಿ


ನಮ್ಮ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಈಗ ಚಾಲನೆ ನೀಡಲಾಗಿದೆ, ಆಗಸ್ಟ್ 16 ರಿಂದ ಯೋಜನೆ ಜಾರಿಗೊಳ್ಳಲಿದೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯ ಹಣಕಾಸಿನ ಸಂಕಷ್ಟಕ್ಕೆ ಸಿಲುಕಲಿದೆ ಎಂಬ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ ಅಂತಹ ಮಾತುಗಳಿಗೆ ಯಾವುದೇ ಬೆಲೆ ಇಲ್ಲ.ಕೊಟ್ಟ ಮಾತಿನಂತೆ ನಡೆದಿದ್ದೇವೆ. ಇಂದಿನ ದಿನ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನವಾಗಿದೆ ಎಂದು ಹೇಳಿದರು.


ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಈ ರಾಜ್ಯ, ರಾಷ್ಟ್ರದಲ್ಲಿ ಏನಾದರೂ ಬದಲಾವಣೆ ಆಗಬೇಕಿದ್ದರೆ ಅದು ಯುವಕರು ಹಾಗೂ ಮಹಿಳೆಯರಿಂದ ಮಾತ್ರ ಸಾಧ್ಯ ಎಂದು ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಹೇಳಿದ ಮಾತನ್ನು ನೆನಪಿಸಿಕೊಂಡ ಅವರು,ನಾಡಿನ ತಾಯಂದಿರಿಗೆ ಗೃಹಲಕ್ಷ್ಮಿ ಯೋಜನೆಯಡಿ ನೆರವು ನೀಡುತ್ತಿರುವದು ಅವರಿಗೆ ಸೇವೆ ಸಲ್ಲಿಸುವ ಭಾಗ್ಯವಾಗಿದೆ ಎಂದರು. ಮುಖ್ಯಮಂತ್ರಿಗಳು ಇಂದು ಬೆಳಗಿದ ಗೃಹಲಕ್ಷ್ಮಿಯ ಜ್ಯೋತಿಯು ರಾಜ್ಯದ ಕೋಟ್ಯಂತರ ಕುಟುಂಬಗಳನ್ನು ಬೆಳಗಿಸುವ ಹಣತೆಯಾಗಿದೆ. ಆರ್ಥಿಕವಾಗಿ ಹೆಣ್ಣು ಕುಟುಂಬದ ಕಣ್ಣು ಎಂಬ ಸಬಲತೆಯನ್ನು ಸಾಕಾರಗೊಳಿಸುವ ಐತಿಹಾಸಿಕ ಹೆಜ್ಜೆಯಾಗಿದೆ. ಕೊಟ್ಟ ಮಾತನ್ನು ಉಳಿಸಿಕೊಂಡು ನುಡಿದಂತೆ ನಡೆದಿದ್ದೇವೆ. ಮಹಿಳೆಯರ ಕೈಯಲ್ಲಿನ ದುಡ್ಡು ಸಮಾಜದ ಆರ್ಥಿಕತೆಗೆ ಚಲನಶೀಲತೆ ತರಲಿದೆ. ಮೈಸೂರಿನಲ್ಲಿ ಅನ್ನಭಾಗ್ಯ, ಕಲಬುರ್ಗಿಯಲ್ಲಿ ಗೃಹಜ್ಯೋತಿ ಹಾಗೂ ಬೆಳಗಾವಿಯಲ್ಲಿ ಗೃಹಲಕ್ಷಿ ಯೋಜನೆಗಳನ್ನು ಉದ್ಘಾಟಿಸಲಾಗುವುದು ಎಂದರು.


ಇದನ್ನೂ ಓದಿ: ಮೈತ್ರಿಕೂಟದ ಕಾರ್ಯಕ್ರಮಕ್ಕೆ ಐಎಎಸ್‌ ಅಧಿಕಾರ ಬಳಕೆ ಆರೋಪ


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಸಚಿವೆ ಲಕ್ಷ್ಮಿ ಆರ್.ಹೆಬ್ಬಾಳ್ಕರ್ ಮಾತನಾಡಿ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಶಿವಾಜಿ ಮಹಾರಾಜರಂತಹ ಮಹಾನ್ ಚೇತನಗಳು ತೋರಿದ ಹಾದಿಯಲ್ಲಿ ವಿಶೇಷವಾಗಿ ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ಸ್ತ್ರೀಶಕ್ತಿಕರಣಗೊಳಿಸುವಂತಹ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ. ಪ್ರಿಯದರ್ಶಿನಿ ಇಂದಿರಾಗಾಂಧಿಯವರು ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿ ದೇಶದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿದ ದಿನದಂದೇ ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತಿರುವುದು ಸಂತಸ ತಂದಿದೆ. ಹಳ್ಳಿಯ ರೈತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ನನಗೆ ಗ್ರಾಮೀಣ ಬದುಕಿನ ಸಂಕಷ್ಟಗಳು ಗೊತ್ತಿವೆ, ಸರ್ಕಾರದಿಂದ ಸಿಗುವ ಗೃಹಲಕ್ಷ್ಮಿಯ ಮಾಸಿಕ 2 ಸಾವಿರ ರೂ.ನೆರವು, ರಾಜ್ಯದ 1.28 ಕೋಟಿ ಕುಟುಂಬಗಳಲ್ಲಿ ನೆಮ್ಮದಿ ಮೂಡಿಸಲಿದೆ. ಆ ಕುಟುಂಬಗಳ ಹಾರೈಕೆ, ಸಮಾಧಾನ ಸರ್ಕಾರಕ್ಕೆ  ಸಿಗುವ ಆಶೀರ್ವಾದವಾಗಿದೆ ಎಂದರು.


ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಚಿವರಾದ ಕೆ.ಹೆಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ, ಡಾ.ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಸುರೇಶ್ ಬಿ.ಎಸ್,ರಹೀಂ ಖಾನ್, ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.