ಧಾರವಾಡ: ಎನ್‌ಇಪಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚಿನ ಉಪನ್ಯಾಸಕರ ಅಗತ್ಯವಿದೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಅಗತ್ಯ ಬೀಳುತ್ತದೆ. ಆದ್ದರಿಂದ ಈಗಿರುವ 11 ಸಾವಿರ ಅತಿಥಿ ಉಪನ್ಯಾಸಕರು ಅಭದ್ರತೆಯ ಭಾವನೆ ಒಳಗಾಗುವ ಅಗತ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ. ತಮ್ಮ ಗೌರವಧನವನ್ನು ಗಣನೀಯವಾಗಿ ಹೆಚ್ಚಿಸಲು ಶ್ರಮಿಸಿದ ಸಚಿವರಿಗೆ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘವು ಬುಧವಾರ ಇಲ್ಲಿ ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.


COMMERCIAL BREAK
SCROLL TO CONTINUE READING

ಈ ಮೊದಲು ಅತಿಥಿ ಉಪನ್ಯಾಸಕರ ಗೌರವಧನಕ್ಕೆ ವರ್ಷಕ್ಕೆ 110 ಕೋಟಿ ರೂ. ಮಾತ್ರ ಮೀಸಲಿಡಲಾಗುತ್ತಿತ್ತು. ಈಗ ಈ ಮೊತ್ತವನ್ನು 280 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಜತೆಗೆ ಆಯಾ ಕಾಲೇಜುಗಳಿಗೆ ಶುಲ್ಕದ ರೂಪದಲ್ಲಿ ಬರುವ ಹಣವನ್ನು ಕಾಲೇಜಿನ ಖಾತೆಗೇ ಹಾಕಲಾಗುತ್ತಿದೆ. ಈಗ ಅತಿಥಿ ಉಪನ್ಯಾಸಕರು ಮುಂದಿಟ್ಟಿರುವ ಇನ್ನೊಂದಿಷ್ಟು ಬೇಡಿಕೆಗಳ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬಹುದೆಂದು ಪರಿಶೀಲಿಸಲು ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು.


ಇದನ್ನೂ ಓದಿ : Crime News: ಪ್ರೇಮಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ..!


ಅತಿಥಿ ಉಪನ್ಯಾಸಕರಿಗೆ ಈಗ ಸಮಯಕ್ಕೆ ಸರಿಯಾಗಿ ವೇತನ ಕೊಡುವ ವ್ಯವಸ್ಥೆ ಮಾಡಲಾಗಿದ್ದು, ಈ ಸಂಬಂಧವಾಗಿ ಪ್ರಾಂಶುಪಾಲರುಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. ನೀವೆಲ್ಲರೂ ಗೌರವದಿಂದ ಬದುಕಬೇಕೆಂಬ ಸದುದ್ದೇಶ ಇದರ ಹಿಂದಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ 6,500 ಹುದ್ದೆಗಳು ಮಂಜೂರಾಗಿವೆ. ಇವೆಲ್ಲ ತುಂಬಿದರೂ  ಅತಿಥಿ ಉಪನ್ಯಾಸಕರು ಆತಂಕ ಪಡಬೇಕಾಗಿಲ್ಲ. ವಾಸ್ತವವಾಗಿ ಅತಿಥಿ ಉಪನ್ಯಾಸಕರಿಗೆ ಈಗ ಬೇಡಿಕೆ ಹೆಚ್ಚಾಗುತ್ತಿದೆ ಎಂದರು. 


ಸರಕಾರಿ ಡಿಗ್ರಿ ಕಾಲೇಜುಗಳಿಗೆ ದೈಹಿಕ ಶಿಕ್ಷಕರು ಮತ್ತು ಗ್ರಂಥಾಲಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಎನ್‌ಇಪಿ ಪ್ರಕಾರ 60 ವಿದ್ಯಾರ್ಥಿಗಳಿಗೆ ಒಂದು ತರಗತಿ ಮಾಡಲಾಗುವುದು. ಡಿಗ್ರಿ ಕಾಲೇಜುಗಳಲ್ಲಿ ಸಪ್ಲಿಮೆಂಟರಿ ಪರೀಕ್ಷೆಗಳನ್ನು ಬೇಗನೆ ನಡೆಸಿ, ಕ್ಷಿಪ್ರವಾಗಿ ಫಲಿತಾಂಶ ಕೊಟ್ಟರೆ ಅನುಕೂಲವಾಗುತ್ತದೆ ಎಂದು ಸೂಚಿಸಿದರು. 


ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ್‌ ಶಹಾಪುರ ಮಾತನಾಡಿ, "ಸಚಿವ ಅಶ್ವತ್ಥನಾರಾಯಣ ಅವರು ಅತಿಥಿ ಉಪನ್ಯಾಸಕರ ಸಮಸ್ಯೆಗಳ ನಿವಾರಣೆಗೆ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಈ ಗೌರವಾರ್ಪಣೆ ಹಿಂದೆಯೇ ಆಗಬೇಕಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರೇರಣೆಗೊಂಡು, ರಾಜ್ಯದ ಉನ್ನತ ಶಿಕ್ಷಣಕ್ಕೆ ಸಮಗ್ರ ಕಾಯಕಲ್ಪ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಅವರ ಎನ್‌ಇಪಿ ಕನಸನ್ನು ಇವರು ನನಸು ಮಾಡುತ್ತಿದ್ದಾರೆ. ಇವರಿಂದಾಗಿ ಅತಿಥಿ ಉಪನ್ಯಾಸಕರಿಗೆ ಗೌರವ ಬಂದಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಇದನ್ನೂ ಓದಿ : ಚಿಕ್ಕಬಳ್ಳಾಪುರ ASI ಮನೆಗೆ ನುಗ್ಗಿ ಶೂಟೌಟ್ ಮಾಡಿ ದರೋಡೆ ಪ್ರಕರಣ : ಆರೋಪಿಗಳ ಬಂಧನ


ಸಚಿವರು ಸರಕಾರಿ ಕಾಲೇಜುಗಳ ಸಬಲೀಕರಣಕ್ಕೂ ಶ್ರಮಿಸುತ್ತಿದ್ದಾರೆ. ಇದಲ್ಲದೆ ಐಟಿಐ ಶಿಕ್ಷಣದ ಪಠ್ಯಕ್ರಮವನ್ನು ಆಮೂಲಾಗ್ರವಾಗಿ ಪರಿಷ್ಕರಿಸಿ, ಅವುಗಳ ಉನ್ನತೀಕರಣಕ್ಕೆ ಕಾರಣಕರ್ತರಾಗಿದ್ದಾರೆ. ವಾಸ್ತವವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ನಾಯಕರು ಬೇಕಾಗಿದ್ದಾರೆ ಎಂದು ಹೇಳಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ಹನುಮಂತಗೌಡ ಕಲ್ಮನಿ, ರಘು ಅಕ್ಮಂಚಿ, ಡಾ.ಡಿ.ಬಿ.ಕರಡೋಣಿ, ಆರ್ ಎಂ ಕುಬೇರಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.