ಬೆಂಗಳೂರು: COVID- 19 ವೈರಸ್ ತಗುಲಿ ಸತ್ತವರನ್ನು ಹೊರತುಪಡಿಸಿಯೂ ಬೆಂಗಳೂರಿನಲ್ಲಿ ಮಾಮೂಲಿಗಿಂತ  ಹತ್ತು ಸಾವಿರ ಜನರು ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಈ ಸಾವುಗಳು ಹೇಗಾದವು ಎಂಬ ಬಗ್ಗೆ ರಾಜ್ಯ ಸರ್ಕಾರ ಸಮಗ್ರ ಮಾಹಿತಿ ನೀಡಬೇಕು ಎಂದು ಮಾಜಿ ಸಚಿವ ಹೆಚ್.ಕೆ. ಪಾಟೀಲ್ (HK Patil) ಆಗ್ರಹಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಕೆ. ಪಾಟೀಲ್, ಒಂದೆಡೆ ಕೋವಿಡ್-19 (COVID-19) ವೈರಸ್ ತಗುಲಿ ಜನ ಸಾಯುತ್ತಿದ್ದಾರೆ. ಇದರ ಹೊರತಾಗಿ ಬೆಂಗಳೂರು ಒಂದರಲ್ಲೇ ಈ ಅವಧಿಯಲ್ಲಿ  ಹತ್ತು ಸಾವಿರ ಜನರು ಎಂದಿಗಿಂತ ಹೆಚ್ಚಾಗಿ ಸತ್ತಿದ್ದಾರೆ. ಈ ಹತ್ತು ಸಾವಿರ  ಸಾವುಗಳು ಹೇಗೆ ಸಂಭವಿಸಿದವು? ಎಂದು ಪ್ರಶ್ನಿಸಿ ರಾಜ್ಯ ಸರ್ಕಾರ ಸಮಗ್ರ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.


ಬೆಂಗಳೂರು ಮಾತ್ರವಲ್ಲದೆ ರಾಜ್ಯಾದ್ಯಂತ ಶೇಕಡಾ 8.2ರಷ್ಟು ಜನ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಇವು ಸರ್ಕಾರ ಸರಿಯಾದ ರೀತಿಯಲ್ಲಿ ವೆಂಟಿಲೇಟರ್ ಗಳನ್ನು ವ್ಯವಸ್ಥೆ ಮಾಡದೇ ಇದ್ದ ಕಾರಣದಿಂದ ಆಗಿರುವ ಸಾವುಗಳು. ರಾಜ್ಯ ಸರ್ಕಾರ ಕೂಡಲೇ ತಜ್ಞರ ಹಾಗೂ ವಿಪಕ್ಷಗಳ ಜೊತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಬೇಕು. ಆಕ್ಸಿಜನ್ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಆಕ್ಸಿಜನ್ ಪೂರೈಕೆ ಮಾಡುವುದರತ್ತ ಗಮನ ಹರಿಸಬೇಕು ಎಂದು ಹೆಚ್.ಕೆ. ಪಾಟೀಲ್ ಆಗ್ರಹಿಸಿದರು.