ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ
ಲೋಕಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆಹೊತ್ತು ಪದತ್ಯಾಗಕ್ಕೆ ಮುಂದಾದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್.
ಬೆಂಗಳೂರು: 2019ರ ಲೋಕಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್. ವಿಶ್ವನಾಥ್ ಘೋಷಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್. ವಿಶ್ವನಾಥ್, ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಅದರ ನೈತಿಕ ಹೊಣೆ ಹೊತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಬಗ್ಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರಿಗೆ ಸುದೀರ್ಘ ಪತ್ರ ಬರೆದಿರುವ ವಿಶ್ವನಾಥ್, ತಾವು ನನ್ನಲ್ಲಿ ವಿಶ್ವಾಸವಿತ್ತು ಜನತಾದಳದ ರಾಜಾಧ್ಯಕ್ಷನನ್ನಾಗಿ ನೇಮಕ ಮಾಡಿದ್ದು, ನನ್ನ ರಾಜಕೀಯ ಜೀವನದ ಬಹುಮುಖ್ಯ ಘಟ್ಟ ಎಂದೇ ನಾನು ಭಾವಿಸಿದ್ದೇನೆ.
ಸ್ವಾಭಿಮಾನದ ಸಂಕೇತವಾಗಿ ನನ್ನ ಮಾತೃ ಪಕ್ಷ ಕಾಂಗ್ರೆಸ್‌ನಿಂದ ಹೊರ ಬರಬೇಕಾದ ಅನಿವಾರ್ಯತೆ ಎದುರಾಗಿ ಆಚೆ ಬಂದು ನಿಂತಾಗ, ನನ್ನ ಅಭಿಲಾಷೆಯಂತೆ ನನಗೆ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪುನರ್ ಜನ್ಮಕ್ಕೆ ಆಶೀರ್ವದಿಸಿದ್ದೀರಿ. ಅದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.