ರವಿ ಬೆಳಗೆರೆ-ಅನಿಲ್ ರಾಜ್ ಪ್ರಕರಣ : ವಿಧಾನ ಸಭೆ ಆದೇಶಕ್ಕೆ ಹೈಕೋರ್ಟ್ ತಡೆ
ಹಾಯ್ ಬೆಂಗಳೂರ್ ವಾರಪತ್ರಿಕೆ ಸಂಪಾದಕ- ಪತ್ರಕರ್ತ ರವಿ ಬೆಳಗೆರೆ ಹಾಗೂ ಯಲಹಂಕ ವಾಯ್ಸ್ ಸಂಪಾದಕ ಅನಿಲ್ ರಾಜ್ ಅವರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ವಿಧಾನಸಭಾ ಹಕ್ಕು ಬಾಧ್ಯತೆ ಸಮಿತಿ ನೀಡಿರುವ ಒಂದು ವರ್ಷ ಜೈಲು ಶಿಕ್ಷೆಗೆ ಬುಧವಾರ ಹೈಕೋರ್ಟ್ ತಡೆ ನೀಡಿದೆ.
ಬೆಂಗಳೂರು: ಹಾಯ್ ಬೆಂಗಳೂರ್ ವಾರಪತ್ರಿಕೆ ಸಂಪಾದಕ- ಪತ್ರಕರ್ತ ರವಿ ಬೆಳಗೆರೆ ಹಾಗೂ ಯಲಹಂಕ ವಾಯ್ಸ್ ಸಂಪಾದಕ ಅನಿಲ್ ರಾಜ್ ಅವರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ವಿಧಾನಸಭಾ ಹಕ್ಕು ಬಾಧ್ಯತೆ ಸಮಿತಿ ನೀಡಿರುವ ಒಂದು ವರ್ಷ ಜೈಲು ಶಿಕ್ಷೆಗೆ ಬುಧವಾರ ಹೈಕೋರ್ಟ್ ತಡೆ ನೀಡಿದೆ.
ತಮ್ಮ ವಿರುದ್ಧದ ಆರೋಪಗಳು ಶಾಸಕರ ಹಕ್ಕು ಚ್ಯುತಿ ವ್ಯಾಪ್ತಿಗೆ ಒಳಪಡುವುದಿಲ್ಲ. ಹೈಕೋರ್ಟ್ ನಿರ್ದೇಶನದಂತೆ ಮತ್ತೂಮ್ಮೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರೂ ಸಮಿತಿ ವಾದ ಮಂಡನೆಗೆ ಅವಕಾಶ ನೀಡಿಲ್ಲ. ಇದೀಗ ಬಂಧಿಸುವಂತೆ ಪೊಲೀಸರಿಗೆ ನಿರ್ದೇಶಿಸಲಾಗಿದೆ. ಹೀಗಾಗಿ ಹಕ್ಕುಭಾದ್ಯತಾ ಸಮಿತಿಯ ಆದೇಶ ರದ್ದುಗೊಳಿಸುವಂತೆ ಪತ್ರಕರ್ತರು ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು.
ಈ ಮನವಿ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಅವರು, ಶಿಕ್ಷೆಗೆ ತಡೆ ನೀಡಿ, ಅಂತಿಮ ಆದೇಶ ನೀಡುವವರೆಗೂ ಇಬ್ಬರು ಪತ್ರಕರ್ತರನ್ನು ಬಂಧಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಈ ಹಿಂದೆ ಶಾಸಕರ ವಿರುದ್ಧ ಲೇಖನ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ರವಿ ಬೆಳಗೆರೆ ಮತ್ತು ಅನಿಲ್ ರಾಜ್ ಅವರಿಗೆ ಜೂನ್ 21ರಂದು ವಿಧಾನ ಸಭೆ ಹಕ್ಕುಬಾಧ್ಯತಾ ಸಮಿತಿಯು ಒಂದು ವರ್ಷದ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿತ್ತು. ಈ ನಡೆಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ, ಹಕ್ಕುಬಾಧ್ಯತಾ ಸಮಿತಿಯಲ್ಲಿ ಈ ಇಬ್ಬರೂ ಪತ್ರಕರ್ತರು ಅರ್ಜಿಯನ್ನು ಸಲ್ಲಿಸಿದ್ದರು.
ಆದರೆ ಆ ಅರ್ಜಿಗಳನ್ನು ವಿಧಾನ ಸಭೆ ವಜಾಗೊಳಿಸುವ ಮೂಲಕ ಒಂದು ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದ ನಿರ್ಣಯವನ್ನು ಖಾಯಂಗೊಳಿಸಿ, ಆ ನಿರ್ಣಯವನ್ನು ಕೂಡಲೇ ಅನುಷ್ಠಾನಕ್ಕೆ ತರುವಂತೆ ಗೃಹ ಇಲಾಖೆಗೆ ಪತ್ರ ಬರೆದಿತ್ತು. ಇದರೊಂದಿಗೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಹಾಗೂ ಯಲಹಂಕ ವಾಯ್ಸ್ ಸಂಪಾದಕ ಅನಿಲ್ ರಾಜ್‌ಗೆ ಬಂಧನ ಭೀತಿ ಎದುರಾಗಿತ್ತು.