ಬೆಂಗಳೂರು: ರಾಜಕೀಯದಲ್ಲಿ ಯಾರೂ ಶತೃವೂ ಅಲ್ಲ, ಮಿತ್ರರೂ ಅಲ್ಲ ಎಂಬ ಮಾತನ್ನು ಯಾರು, ಯಾವಾಗ ಹೇಳಿದರೋ ಗೊತ್ತಿಲ್ಲ. ಅದು ಮಾತ್ರ ಪದೇ ಪದೇ ಸಾಬೀತಾಗುತ್ತಲೇ ಇದೆ. ಸದ್ಯದ ಸರದಿ ಮಾಜಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಕೆಲವೇ ದಿನಗಳ ಹಿಂದೆ ರಾಜ್ಯ ವಿಧಾನಸಭಾ ಚುನಾವಣಾ ಕಣದಲ್ಲಿ ಬದ್ಧ ವೈರಿಗಳಾಗಿದ್ದ ದೇವೇಗೌಡ ಮತ್ತು ಸಿದ್ದರಾಮಯ್ಯ ಈಗ ದೋಸ್ತಿಗಳು. ನಾಳೆ, ದಶಕಗಳ ಬಳಿಕ ರಾಜ್ಯ ಕಂಡ ಈ ಇಬ್ಬರು ದಿಗ್ಗಜ ನಾಯಕರು ಜೊತೆಜೊತೆಯಾಗಿ ಜಂಟಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಹಳೆಯ ಸ್ನೇಹಿತರು ಮತ್ತೀಗ ಜೊತೆಜೊತೆಯಾಗಿ ಸುದ್ದಿಗೋಷ್ಟಿ ನಡೆಸುತ್ತಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಜೊತೆಯಾಗಿಯೇ ಉಪ ಚುನಾವಣಾ ಪ್ರಚಾರ ನಡೆಸುವ ಬಗ್ಗೆಯೂ ಮಾಹಿತಿ ಕೊಡಲಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಗೆ ಮೈತ್ರಿ ಸರ್ಕಾರದಲ್ಲಿ ಮತ್ತು ಕಾಂಗ್ರೆಸ್-ಜೆಡಿಎಸ್ ನಡುವೆ ಯಾವುದೇ ಬಿರುಕಿಲ್ಲ, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಕೊಡಲು ಹೊರಟಿದ್ದಾರೆ.


ಹಿಂದೆ ಇದೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದರು. ಆಗ ಅವರನ್ನು ದೇವೇಗೌಡರು ಜೆಡಿಎಸ್ ಪಕ್ಷದಿಂದ ಕಿತ್ತುಹಾಕಿದ್ದರು. ಅಲ್ಲಿಂದ ಹಳಸಿದ್ದ ದೇವೇಗೌಡ ಮತ್ತು ಸಿದ್ದರಾಮಯ್ಯ ಸಂಬಂಧ ಈಗ ಸಮ್ಮಿಶ್ರ ಸರ್ಕಾರ ರಚನೆ ಮಾಡುವಷ್ಟು ಸುಧಾರಿಸಿದೆ. ನಾಳೆ ಜಂಟಿ ಸುದ್ದಿಗೋಷ್ಟಿಯ ಬಳಿಕ ಉಪ ಚುನಾವಣಾ ಕಣದಲ್ಲಿ ದೇವೇಗೌಡ ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆ ಹಂಚಿಕೊಳ್ಳುವುದನ್ನು ಕಾಣಬಹುದು.