ಹೆಚ್.ವಿಶ್ವನಾಥ್ ರಾಜೀನಾಮೆ ವಿಚಾರ: ನಾಳೆ ಪಕ್ಷದ ನಾಯಕರ ಸಭೆ ಕರೆದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ
ವಿಶ್ವನಾಥ್ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ, ನಮ್ಮ ಪಕ್ಷದಲ್ಲೇ ಇರುತ್ತಾರೆ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ನನ್ನನ್ನು ಒತ್ತಾಯಿಸಬೇಡಿ ಎಂದು ಕೇಳಿಕೊಂಡಿದ್ದಾರೆ ಎಂದು ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್.ವಿಶ್ವನಾಥ್ ರಾಜೀನಾಮೆ ಅಂಗೀಕರಿಸಬೇಕೆಂದು ಒತ್ತಡ ಹೇರಿರುವ ಬೆನ್ನಲ್ಲೇ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಾಳೆ ಪಕ್ಷದ ಸದಸ್ಯರ ಸಭೆ ಕರೆದಿದ್ದಾರೆ. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷಕ್ಕೆ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಮಾಡುವ ಸಾದ್ಯತೆ ಇದೆ ಎನ್ನಲಾಗಿದೆ.
ಇಂದಿಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ವಿಧಾನಸಭೆ, ಲೋಕಸಭೆ, ಸ್ಥಳೀಯ ಸಂಸ್ಥೆಯಲ್ಲಿ ನಮ್ಮ ಪಕ್ಷದಿಂದ ಸೋತಿರುವಂತಹ ಎಲ್ಲ ಸದಸ್ಯರನ್ನೂ ಸಹ ಆಹ್ವಾನ ಮಾಡಲಾಗಿದೆ. ಈ ಹಿಂದೆ ಗೆದ್ದ ಅಭ್ಯರ್ಥಿಗಳಿಗೆ ನಾನು ಸನ್ಮಾನ ಮಾಡಿದ್ದೆ. ಆದರೆ ಸೋತವರನ್ನು ಕಡೆಗಣಿಸಿದರು ಎಂಬ ಭಾವನೆ ಬರಬಾದರು ಎಂಬ ಕಾರಣಕ್ಕಾಗಿ ಹಾಗೂ ಸೋತರವರ ಮನಸ್ಸಿನಲ್ಲಿ ಸೋತೆವು ಎಂಬ ಭಾವನೆ ಬರಬಾರದು ಎಂಬ ಉದ್ದೇಶದಿಂದ ನಾಳೆ ನಡೆಯಲಿರುವ ಸಭೆಯಲ್ಲಿ ಅವರನ್ನೂ ಆಹ್ವಾನಿಸಲಾಗಿದೆ ಎಂದು ದೇವೇಗೌಡರು ತಿಳಿಸಿದರು.
ಹೆಚ್.ವಿಶ್ವನಾಥ್ ರಾಜೀನಾಮೆ ವಿಚಾರವಾಗಿ ಮಾತನಾಡಿದ ದೇವೇಗೌಡರು, ಈ ಹಿಂದಿನ ರಾಜಕೀಯ ಬೆಳವಣಿಗೆಗೆ ವಿಶ್ವನಾಥ್, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿದ್ದಾರೆ. ಆದರೆ, ವಿಶ್ವನಾಥ್ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ, ನಮ್ಮ ಪಕ್ಷದಲ್ಲೇ ಇರುತ್ತಾರೆ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ನನ್ನನ್ನು ಒತ್ತಾಯಿಸಬೇಡಿ ಎಂದು ಕೇಳಿಕೊಂಡಿದ್ದಾರೆ. ಅದರಂತೆ ಆಗಲಿ ಎಂದಿರುವುದಾಗಿ ಹೇಳಿದರು.
ನಾಳೆ ನಡೆಯುವ ಸಭೆಯಲ್ಲಿ ಕೇವಲ ಪಕ್ಷದ ಬಲವರ್ಧನೆ, ಮುಂಬರುವ ಚುನಾವಣೆ ವಿಚಾರವಾಗಿ ಚರ್ಚೆ ನಡೆಸಲಾಗುವುದು. ನಾಳಿನ ಸಭೆಯಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅಲ್ಲದೆ, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಗ್ರಾಮವಾಸ್ತವ್ಯ ಕಾರ್ಯಕ್ರಮ ಇರುವುದರಿಂದ ಅವರು ಸಭೆಯಲ್ಲಿ ಇರುವುದಿಲ್ಲ. ಸಭೆಯಲ್ಲಿ ಸಮ್ಮಿಶ್ರ ಸರ್ಕಾರದ ಬಗ್ಗೆ ಚರ್ಚೆಯಾಗಲೀ, ಸಚಿವ ಸಂಪುಟ ವಿಸ್ತರಣೆ ಬಗ್ಗೆಯಾಗಲೀ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹುಟ್ಟುಹಬ್ಬದ ಸದರ್ಭದಲ್ಲಿ ತಾವೂ ದೆಹಲಿಗೆ ತೆರಳಿ ಅವರಿಗೆ ಶುಭ ಹಾರಿಸಿದ್ದಾಗಿ ತಿಳಿಸಿದ ದೇವೇಗೌಡರು, "ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಯಾರಿಗೂ ಕೊಡಬೇಡಿ. ಇದರಿಂದ ಪಕ್ಷಕ್ಕೆ ತೊಂದರೆ ಆಗಲಿದೆ. ಲಕ್ಷಾಂತರ ಜನ ಕಾರ್ಯಕರ್ತರಿದ್ದಾರೆ. ನೀವೇ ಅಧ್ಯಕ್ಷರಾಗಿ ಮುಂದುವರೆಯಬೇಕು" ಎಂದು ತಿಳಿಸಿರುವುದಾಗಿ ಹೇಳಿದರು.