ತುಮಕೂರು: ತುಮಕೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಹೆಚ್.ಡಿ. ದೇವೇಗೌಡರನ್ನು ವೈಯಕ್ತಿಕವಾಗಿ ಹಾಗೂ ಕ್ಷೇತ್ರದ ಜನತೆ ಪರವಾಗಿ ಸ್ವಾಗತಿಸುತ್ತೇನೆ. ಇವರ ಗೆಲುವಿಗೆ ಎಲ್ಲಾ ಕಾರ್ಯಕರ್ತರು ಪಕ್ಷಾತೀತವಾಗಿ ಪ್ರಾಮಾಣಿಕವಾಗಿ ದುಡಿಯಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.


COMMERCIAL BREAK
SCROLL TO CONTINUE READING

ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಮಾಜಿ ಪ್ರಧಾನಿಯಾದ ಹೆಚ್.ಡಿ. ದೇವೇಗೌಡರು ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವರು ನಮ್ಮ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ಸ್ವಾಗತಾರ್ಹ. ದೇವೇಗೌಡರು ಸ್ವತಃ ಸ್ಪರ್ಧಿಸುತ್ತಿರುವುದರಿಂದ ಈ ಕ್ಷೇತ್ರ ಬಿಟ್ಟುಕೊಡಲಾಗಿದೆ. 


ದೇವೇಗೌಡರ ಗೆಲುವಿಗೆ ಕಾಂಗ್ರೆಸ್‌ನ ಮುಖಂಡರು, ಕಾರ್ಯಕರ್ತರು ಸಹ ಶ್ರಮಿಸಲಿದ್ದಾರೆ. ಒಂದು ವೇಳೆ ಇವರು ಸ್ಪರ್ಧಿಸದಿದ್ದರೆ ಈ ಕ್ಷೇತ್ರವನ್ನು ನಮಗೇ ಬಿಟ್ಟುಕೊಡುವಂತೆ ಹೇಳಿದ್ದೆವು. ಆದರೆ ದೇವೇಗೌಡರೇ ಸ್ಪರ್ಧಿಸುತ್ತಿರಿವುದರಿಂದ ಅವರನ್ನು ಗೆಲ್ಲಿಸಲು ನಾವೆಲ್ಲ ಒಟ್ಟಾಗಿ ಶ್ರಮಿಸುತ್ತೇವೆ. ದೇವೇಗೌಡರು ನೂರಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದಾರೆ ಎಂದರು.


ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬಾರದು. ಬಿಜೆಪಿ ಗೆಲ್ಲದಂತೆ ನೋಡಿಕೊಳ್ಳುವ ಜೊತೆಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಕರ್ನಾಟಕದಲ್ಲಿ ಮೈತ್ರಿಯಾಗಿ 28 ಕ್ಷೇತ್ರ ಗೆಲ್ಲಲಿದ್ದೇವೆ. ಹಿಂದೊಮ್ಮೆ ಕಾಂಗ್ರೆಸ್ ರಾಜ್ಯದಲ್ಲಿ 27 ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಈ ಬಾರಿ ಮತ್ತೊಮ್ಮೆ 28 ಕ್ಷೇತ್ರದಲ್ಲಿ ಗೆಲ್ಲಲಿದ್ದೇವೆ ಎಂದರು.


ಕಾಂಗ್ರೆಸ್‌ನಿಂದ ಬಂಡಾವೆದ್ದು ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್‌ನ ಮುಖಂಡರು ನಾಮಪತ್ರ ಹಿಂಪಡೆದು ಮೈತ್ರಿಗೆ ಬೆಂಬಲಿಸುವ ವಿಶ್ವಾಸವಿದೆ ಎಂದು ಪರಮೇಶ್ವರ್ ಇದೇ ವೇಳೆ ತಿಳಿಸಿದರು.