ಬೆಂಗಳೂರು: “ತಮ್ಮ ಸರ್ಕಾರ ಉರುಳಿಸಿದವರನ್ನೇ ಜೊತೆಯಲ್ಲೇ ಕೂರಿಸಿಕೊಂಡು ಈಗಿನ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಹಾಗೂ ಅವರನ್ನು ತಬ್ಬಿಕೊಳ್ಳುವ ದುಸ್ಥಿತಿಗೆ ಕುಮಾರಸ್ವಾಮಿ ಅವರು ಇಳಿದಿದ್ದಾರೆ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.


COMMERCIAL BREAK
SCROLL TO CONTINUE READING

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಶುಕ್ರವಾರ ನಡೆದ ಪದ್ಮನಾಭನಗರದ ವಿವಿಧ ಪಕ್ಷಗಳ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು:


“ಬಿಜೆಪಿ ಮತ್ತು ಜೆಡಿಎಸ್ ನವರು ಮೈತ್ರಿ ಆದರೂ ಮಾಡಿಕೊಳ್ಳಲಿ, ಏನನ್ನಾದರೂ ಜೋಡಿಸಿಕೊಳ್ಳಲಿ, ಅದು ನಮಗೆ ಸಂಬಂಧಪಟ್ಟಿದ್ದಲ್ಲ. ನಾನು ಅನೇಕ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರನ್ನು ಮೈತ್ರಿ ಬಗ್ಗೆ ಕೇಳಿದೆ. ಅದಕ್ಕೆ ಅವರುಗಳು “ನಮ್ಮ ಸರ್ಕಾರ ಬೀಳಿಸಿದವರ ಹತ್ತಿರವೇ ಕುಮಾರಸ್ವಾಮಿ ಅವರಿಗೆ ಮತ್ತೆ ಏಕೆ ನೆಂಟಸ್ತನ? ಹಾಗಾದರೆ ಪಕ್ಷದ ನೀತಿ ಏನು? ನಾವು ಕಾರ್ಯಕರ್ತರಿಗೆ ಏನು ಹೇಳುವುದು ಎಂದು ಕೇಳುತ್ತಿದ್ದಾರೆ, ನಮಗೆ ಉತ್ತರ ನೀಡಲು ಆಗುತ್ತಿಲ್ಲ” ಎಂದು ಹೇಳುತ್ತಿದ್ದಾರೆ. ವಿರೋಧ ಪಕ್ಷಗಳಿಗೆ ನಾವು ಉತ್ತರ ಕೊಡುವುದಿಲ್ಲ, ಅವರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉತ್ತರ ಕೊಡುತ್ತಾರೆ.


ಚುನಾವಣೆ ಮುಗಿದು 110 ದಿನಗಳಾದರೂ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡದ ದುಸ್ಥಿತಿಗೆ ಬಿಜೆಪಿ ಪಕ್ಷ ಬಂದಿದೆ. ಅವರವರ ಅನುಕೂಲಕ್ಕೆ ಬಿಜೆಪಿ- ಜೆಡಿಎಸ್ ರಾಜಕಾರಣ ಮಾಡುತ್ತಿವೆ. ಯಾರ ವಯಸ್ಸೂ ಕಡಿಮೆಯಾಗುವುದಿಲ್ಲ, ದೊಡ್ಡ- ದೊಡ್ಡ ನಾಯಕರು ಮೇಲೆಯೇ ಕುಳಿತಿರುತ್ತಾರೆ. ಕಾರ್ಯಕರ್ತರು ಹಾಗೂ ಮುಖಂಡರುಗಳು ನೆಲದಲ್ಲೇ ಕುಳಿತಿರುತ್ತಾರೆ.


 ಇದನ್ನೂ ಓದಿ-HD Kumaraswamy Health Updates: ಎಚ್​​ಡಿಕೆ ಆರೋಗ್ಯದ ಬಗ್ಗೆ ಅನಿತಾ ಕುಮಾರಸ್ವಾಮಿ​ ಹೇಳಿದ್ದೇನು..?


ಈ ಭಾರತ್ ಜೋಡೋ ಸಭಾಂಗಣದಲ್ಲಿ ಎಲ್ಲಾ ಮನಸ್ಸುಗಳು ಒಂದಾಗುತ್ತಿವೆ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಕಾಂಗ್ರೆಸ್ ಪಕ್ಷ ನಿಮ್ಮನ್ನು ನಡೆಸಿಕೊಳ್ಳುತ್ತದೆ. ತಾಳ್ಮೆಯಿಂದ ಇದ್ದರೆ ನಿಮಗೂ ಒಂದಲ್ಲ ಒಂದು ದಿನ ಸೂಕ್ತ ಸ್ಥಾನಮಾನ ದೊರೆಯುತ್ತದೆ. ಸಾಕಷ್ಟು ಸಮಿತಿಗಳು, ನಿಗಮ ಮಂಡಲಿಗಳು ಇದ್ದಾವೆ, ಅವಸರ ಬೇಡ.


2028 ರಲ್ಲಿ ಪದ್ಮನಾಭನಗರ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆಯಾಗುತ್ತಾರೆ ಎನ್ನುವ ಭರವಸೆಗೆ ಶುಕ್ರವಾರದ ಶುಭದಿನ ಪೀಠಿಕೆಯಾಗಿದೆ. ವಿವಿಧ ಪಕ್ಷಗಳ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ವಿಶ್ವ ಪ್ರಜಾಪ್ರಭುತ್ವ ದಿನ ಸಾಕ್ಷಿಯಾಗಿದೆ. ಇಂತಹ ಪವಿತ್ರವಾದ ದಿನದಂದು ಸಂವಿಧಾನದ ಪೀಠಿಕೆ ಓದಿ ನಾನು ಮತ್ತು ರಾಮಲಿಂಗಾರೆಡ್ಡಿ ಅವರು ಈ ಶುಭ ಕಾರ್ಯಕ್ಕೆ ಬಂದಿದ್ದೇವೆ.


ಸಂಘಟನೆ ಮಾಡುವುದು, ಪಕ್ಷ ಕಟ್ಟುವುದು ಅತ್ಯಂತ ಕಷ್ಟದ ಕೆಲಸ ಎಂಬುದು ನನಗೆ ಅರಿವಿಗೆ ಬಂದಿದೆ. ಇಂದು ಪಕ್ಷ ಸೇರಿದವರು ಬೆಂಗಳೂರಿನಲ್ಲಿ ಹಾಗೂ ಪದ್ಮನಾಭನಗರದಲ್ಲಿ ದೊಡ್ಡ ಸಂಘಟನ ಶಕ್ತಿಗಳು. ಸೂಕ್ತ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಸೇರಿರುವ ನಿಮ್ಮ ನಿರ್ಧಾರ ಸರಿಯಾಗಿದೆ. ಇದು ಭಾಗ್ಯ, ಇದು ಭಾಗ್ಯ ಇದು ಭಾಗ್ಯವಯ್ಯ ಪದುಮನಾಭನ ಪಾದ ಭಜನೆ ಪರಮಸುಖವಯ್ಯಾ ಎನ್ನುವ ಪುರಂದರದಾಸರ ಕೀರ್ತನೆಯಂತೆ ಪದ್ಮನಾಭನಗರದ ನಾಯಕರನ್ನು ಅಪ್ಪಿಕೊಳ್ಳುವ ಭಾಗ್ಯ ಸಿಕ್ಕಿದ್ದು ನಮ್ಮ ಪುಣ್ಯ.


ರಾಮಲಿಂಗಾರೆಡ್ಡಿ ಅವರು ಹಾಗೂ ನಾವು ಪದ್ಮನಾಭನಗರದ ನಾಯಕರ ಜೊತೆಗಿದ್ದೇವೆ. ಪಕ್ಷದ ಹಳಬರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು, ಪದ್ಮನಾಭನಗರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲದೇ ಇರಬಹುದು ಆದರೆ ಕಾರ್ಯಕರ್ತರು ಪಕ್ಷದ ಭಾವುಟ ಹಿಡಿದಿದ್ದಾರೆ “ಹೆಣ, ಪಲ್ಲಕ್ಕಿ ಹೊತ್ತಿದ್ದಾರೆ” ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. 


ಕಾಂಗ್ರೆಸ್ ಪಕ್ಷ ಸೇರುವವರನ್ನು ತಡೆದರು, ಅಡ್ಡಿಪಡಿಸಿದರು. ಈಗ ಬಿಜೆಪಿಗೆ ಕಾರ್ಯಕರ್ತರು ನೆನಪಾಗುತ್ತಿದ್ದಾರೆ.  ಅಶೋಕಣ್ಣನಿಗೆ ಅನೇಕ ಕ್ಷೇತ್ರಗಳು ಇದ್ದವು ಅಲ್ಲೆ ಎಲ್ಲಾದರೂ ನಿಲ್ಲಬಹುದಿತ್ತು, ಯಾಕೋ ಇಲ್ಲೇ ಬಂದು ನಿಂತು ನಿಷ್ಟಾವಂತ ಕಾರ್ಯಕರ್ತರ ಬೆಳವಣಿಗೆಗೆ ಅಡ್ಡಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ನೋಡೋಣ. ಕನಕಪುರದಿಂದ ಬಂದು ನೆಲೆ ನಿಂತಿರುವ 35 ಸಾವಿರ ಮತದಾರರು ಕ್ಷೇತ್ರದಲ್ಲಿ ಇದ್ದಾರೆ. ನಾವೆಲ್ಲಾ ಒಟ್ಟಿಗೆ ಸೇರೋಣ, ಚರ್ಚೆ ಮಾಡೋಣ, ಕೆಲಸ ಮಾಡೋಣ.


 ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ : ಚಾಮರಾಜನಗರದಲ್ಲಿ ರೈತರ ಪ್ರತಿಭಟನೆ


ಗ್ಯಾರಂಟಿಗಳು ಬಿಜೆಪಿಗೆ ಏಟು ಕೊಟ್ಟಿದೆ. ನೆನ್ನೆ ರಾಜಸ್ಥಾನದಲ್ಲಿ ಅನೇಕ ರಾಜ್ಯಗಳ ನಾಯಕರುಗಳು ಹೇಳುತ್ತಿದ್ದರು ಡಿ.ಕೆ ಅವರೇ ನೀವು ಕರ್ನಾಟಕದಲ್ಲಿ ಕೊಟ್ಟ ಗ್ಯಾರಂಟಿ ಏಟು ಬಿಜೆಪಿ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ. ಗ್ಯಾರಂಟಿ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆ ಎಂದು ಪ್ರಧಾನಿಗಳು ಹೇಳುತ್ತಾ ಇದ್ದರು, ಈಗ ಬಿಜೆಪಿ ಆಡಳಿತವಿರುವ ರಾಜ್ಯಗಳು ಕರ್ನಾಟಕ ಮಾದರಿಯನ್ನು ಅನುಕರಿಸುತ್ತಿವೆ ಎಂದರು.


ಇಡೀ ದೇಶದಲ್ಲಿ ಯಾರೂ ಸಹ ನಮ್ಮಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಆಗುವುದಿಲ್ಲ, ಮಹಿಳೆಯರ ಸಬಲೀಕರಣಕ್ಕೆ ದೊಡ್ಡ ಹೆಜ್ಜೆ ಇದಾಗಿದೆ. ಲೋಕಸಭೆ ಆದ ಮೇಲೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಅಧಿಕಾರದಲ್ಲಿ ಇರುವ ತನಕ ಈ ಯೋಜನೆಗಳನ್ನು ನಿಲ್ಲಿಸುವುದಿಲ್ಲ.ನಾನು ಯಾರಿಗೂ ಹೆದರಿಕೊಳ್ಳುವುದಿಲ್ಲ, ಕೆಲವೊಂದಷ್ಟು ಜನರಿಗೆ ಉತ್ತರಕೊಡುವ ಕೆಲಸ ಬಾಕಿ ಇದೆ, ಸಮಯ ಬಂದಾಗ ನೀಡುತ್ತೇನೆ.” ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.