ದೇವೇಗೌಡರು ಹೊಟ್ಟೆಪಾಡಿಗೆ ಬಿಜೆಪಿ ಜತೆ ಹೋಗಿದ್ದಾರೆ ಎಂದಿದ್ದ ಚೆಲುವರಾಯಸ್ವಾಮಿಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ
ಹೊಟ್ಟೆಪಾಡಿಗಾಗಿ ದೇವೇಗೌಡರು ಬಿಜೆಪಿ ಜತೆ ಹೋಗಿದ್ದಾರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ನೀಡಿರುವ ಲಘುವಾದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಡ್ಯದಲ್ಲಿ ಶುಕ್ರವಾರ ಲೋಕಸಭೆ ಚುನಾವಣೆಗಾಗಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಂಡ್ಯ: ಹೊಟ್ಟೆಪಾಡಿಗಾಗಿ ದೇವೇಗೌಡರು ಬಿಜೆಪಿ ಜತೆ ಹೋಗಿದ್ದಾರೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ನೀಡಿರುವ ಲಘುವಾದ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಡ್ಯದಲ್ಲಿ ಶುಕ್ರವಾರ ಲೋಕಸಭೆ ಚುನಾವಣೆಗಾಗಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದೆ ತಮ್ಮನ್ನು ಮಂತ್ರಿ ಮಾಡಿಸುವಂತೆ ಈ ವ್ಯಕ್ತಿ ನನಗೆ ದುಂಬಾಲು ಬಿದ್ದಿದ್ದರು. ಹೊಟ್ಟೆಪಾಡಿಗಾಗಿ ಆಗ ಇವರು ನನಗೆ ದುಂಬಾಲು ಬಿದ್ದಿದ್ದರಾ? ಎಂದು ಮಾಜಿ ಮುಖ್ಯಮಂತ್ರಿಗಳು ತೀಕ್ಷ್ಣವಾಗಿ ಪ್ರಶ್ನಿಸಿದರು.ಈತನನ್ನು ಮಂತ್ರಿ ಮಾಡಲು 58 ಶಾಸಕರ ಸಭೆಯನ್ನು ನಾನು ನಡೆಸಬೇಕಾಯಿತು. ಪಿ.ಜಿ.ಆರ್.ಸಿಂಧ್ಯಾ ಅವರ ಮನೆಯಲ್ಲಿ ನಿರ್ಧಾರ ಆಗಿದ್ದು ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರನ್ನು ಮಂತ್ರಿ ಮಾಡಬೇಕು ಎಂದು. ಆದರೆ ನಾನು ಎಲ್ಲರನ್ನೂ ಒಪ್ಪಿಸಿ ಚೆಲುವರಾಯಸ್ವಾಮಿಯ ಹೆಸರನ್ನು ಪಟ್ಟಿಯಲ್ಲಿ ಸೇರಿಸಿ ವಿಜಯಲಕ್ಷ್ಮಿ ಅವರ ಹೆಸರನ್ನು ಹೊಡೆಸಿ ಹಾಕಿಸಿದೆ. ಇದನ್ನು ನಾನು ಮಾಡಿದ್ದು ಹೊಟ್ಟೆಪಾಡಿಗಾಗಿಯೇ? ಇಂಥ ಮನುಷ್ಯ ನಮ್ಮ ಹೊಟ್ಟೆಪಾಡಿನ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಣ ಕೊಬ್ಬರಿ ತಿನ್ನಿ: ದೇಹಕ್ಕೆ ಸಿಗುತ್ತೆ ಈ 5 ಅದ್ಭುತ ಪ್ರಯೋಜನಗಳು
ನಮ್ಮದು ಹೊಟ್ಟೆಪಾಡು ಎನ್ನುವ ಈ ಮನುಷ್ಯ ಹುಟ್ಟಿದಾಗಲೇ ಮಹಾರಾಜರ ವಂಶಸ್ಥರಾ? ಅವರ ಬಗ್ಗೆ ನನಗಿಂತ ನಾಗಮಂಗಲದ ಜನತೆಗೆ ಚೆನ್ನಾಗಿ ಗೊತ್ತಿರಬೇಕು. ನನ್ನ ಹೊಟ್ಟೆಪಾಡಿನ ಬಗ್ಗೆ ಮಾತನಾಡುವ ಇವರು, ಆರು ತಿಂಗಳು ನನ್ನ ಬಳಿ ಗೋಳಾಡಿದರು. ಮಂತ್ರಿ ಮಾಡಲಿಲ್ಲ ಅಂತಾ ನನ್ನ ಹಿಂದೆ ಬಿದ್ದಿದ್ದರು. ಈ ಮನುಷ್ಯನಿಗಾಗಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡರಿಗೆ ಅವಕಾಶ ತಪ್ಪಿಸಲಾಯಿತು ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಕುಮಾರಸ್ವಾಮಿ.
ದೇವೇಗೌಡರು ಪಕ್ಷ ಹೇಗೆ ಕಟ್ಟಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ನನ್ನ ಬಿಡದಿ ತೋಟ ಮಾರಿ ಚುನಾವಣೆ ಮಾಡಲು ಹೋಗಿದ್ದೆ. ಬಡ್ಡಿ ವ್ಯವಹಾರ ಮಾಡುವವರಿಂದ ಹಣ ತಂದು ಚುನಾವಣೆ ಮಾಡಿದ್ದೇವೆ. ನಾವು ಬೇರೆ ಹಾದಿಯಿಂದ ಹಣ ಸಂಪಾದಿಸಿಲ್ಲ. ಇವತ್ತು ಪಕ್ಷದಿಂದ ಜಾತ್ಯತೀತ ಪದ ತೆಗೆದು ಬಿಡಿ ಅಂತಾರೆ ಇವರು. ನಮಗಾಗಿ ಇನ್ನೊಬ್ಬರಿಗೆ ನಾನು ತೊಂದರೆ ಕೊಟ್ಟಿಲ್ಲ. ಮತ್ತೊಬ್ಬರ ಬಾಳು ಹಾಳು ಮಾಡಿಲ್ಲ ನಾನು. ಬಿಜೆಪಿ ಮೈತ್ರಿಗೆ ಕಾರಣ ಯಾರು? ನಮ್ಮ ಪಕ್ಷದ ವಿರುದ್ಧ ಸಂಘಟಿತ ಅಪಪ್ರಚಾರ ನಡೆಸಿದ್ದು ಇವರೇ ಅಲ್ಲವೇ ಎಂದು ಅವರು ಕಿಡಿಕಾರಿದರು.
2018ರಲ್ಲಿ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರದಲ್ಲೂ ಬಹಳ ಅಂತರದಿಂದ ಗೆಲ್ಲಿಸಿ ಇತಿಹಾಸ ನಿರ್ಮಿಸಿದ್ದು ಮಂಡ್ಯ ಜನ. ಅಂದು ನಿಮ್ಮ ಆಶೀರ್ವಾದದಿಂದ ಕಾಂಗ್ರೆಸ್ ಜತೆ ಸರಕಾರ ಮಾಡಿದೆ. ಮೊದಲ ಬಜೆಟ್ ಮಂಡಿಸಲು ಅವಕಾಶ ಕೊಡಲಿಲ್ಲ. ನಮ್ಮ ಹಳೆಯ ಬಜೆಟ್ ಮುಂದುವರಿಸಿ ಅಂದರು. ಸ್ವತಂತ್ರವಾಗಿ ಸರಕಾರ ನಡೆಸಲು ಬಿಡಲಿಲ್ಲ. ಆದರೂ ದೇವೇಗೌಡರ ಬಗ್ಗೆ ಇವರು ಕೇವಲವಾಗಿ ಮಾತನಾಡುತ್ತಾರೆ. ಪ್ರಧಾನಿಯಾಗಿ ಅವರು ಅದ್ಭುತ ಕಾರ್ಯಕ್ರಮಗಳನ್ನು ಕೊಟ್ಟರು. ಅವರು ಎಂದೂ ಸ್ವಾಭಿಮಾನ ಬಿಟ್ಟುಕೊಡಲಿಲ್ಲ. ಇವತ್ತು ಗ್ಯಾರಂಟಿ ಗ್ಯಾರಂಟಿ ಅಂತಾರೆ. ಫ್ರೀ ಕರೆಂಟ್ ಅಂತಾರೆ.ಅದರಲ್ಲಿ ದೊಡ್ಡ ಸಮಸ್ಯೆ ಇದೆ. ಗ್ಯಾರಂಟಿ ಯೋಜನೆ ಅನ್ನೋದು ಬೋಗಸ್ ಎಂದು ಕೆಂಡಮಂಡಲಾರಾದರು ಮಾಜಿ ಮುಖ್ಯಮಂತ್ರಿಗಳು.
ಜಾಹೀರಾತಿನಲ್ಲಿ ಬರೀ ಸುಳ್ಳುಗಳನ್ನೇ ಹೇಳ್ತಿದ್ದಾರೆ ಕಾಂಗ್ರೆಸ್ ನವರು. ನಿತ್ಯವೂ ಎದ್ದ ತಕ್ಷಣ ಪೇಪರ್ ನಲ್ಲಿ ಅವರ ಫೋಟೋಗಳನ್ನು ನೋಡಬೇಕು. ಒಂದು ವರ್ಷದಿಂದ ಕೋಟ್ಯಂತರ ರೂ. ಜಾಹೀರಾತು ಕೊಟ್ಟಿದ್ದಾರೆ. ಜಾಹೀರಾತಿಗೆ ಕೊಟ್ಟ ಹಣದಿಂದ ಹಲವು ಗ್ರಾಮಗಳ ಅಭಿವೃದ್ಧಿ ಮಾಡಬಹುದಿತ್ತು. ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಹಣವನ್ನು ಜಾಹೀರಾತಿಗೆ ಪೋಲು ಮಾಡ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ನಾನು ಮಂಡ್ಯ ಜಿಲ್ಲೆಗೆ ಏನು ಮಾಡಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇವರು ನನ್ನನ್ನು ಕೇಳುತ್ತಾರೆ, ಮಂಡ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಅಂತ. ಮಂಡ್ಯಕ್ಕೆ ಬಜೆಟ್ ನಲ್ಲಿ ಅನುದಾನ ಕೊಟ್ಟರೆ ಅದನ್ನು ಮಂಡ್ಯ ಬಜೆಟ್ ಎಂದು ಹಿಯ್ಯಾಳಿಸಿದರು. ಈಗ ನಾಟಿ ಸ್ಟೈಲ್ ನಲ್ಲಿ ಚುನಾವಣೆ ಮಾಡುತ್ತಾರಂತೆ. ಇವರಿಗೆಲ್ಲ ನಾವು ಏನು ಅನ್ಯಾಯ ಮಾಡಿದ್ದೆವು. ನಾಟಿ ಸ್ಟೈಲ್ ಎಂದರೆ ಹಣದಿಂದ ಚುನಾವಣೆ ನಡೆಸುವುದಾ? ಎಂದು ಕುಮಾರಸ್ವಾಮಿ ಅವರು ಕಟುವಾಗಿ ಪ್ರಶ್ನಿಸಿದರು.
ನಾಟಿ ಸ್ಟೈಲ್ ರಾಜಕೀಯ ಅಂತಾರೆ ಕೆಲವರು. ದುಡ್ಡಿನಿಂದ ರಾಜಕೀಯ ಮಾಡೋದು ಅಲ್ಲ.ಕೆಲವರಿಗೆ ಈ ಚುನಾವಣೆ ಕಲೆಕ್ಷನ್ ಮಾಡಿಕೊಳ್ಳಲು ಒಳ್ಳೆಯ ಅವಕಾಶ ಎಂದು ಕಾಂಗ್ರೆಸ್ ಮೇಲೆ ಅವರು ಚಾಟಿ ಬೀಸಿದರು.ಮಂಡ್ಯ ಜಿಲ್ಲೆಯ ಜನತೆ ನಮಗೆ ಅನ್ಯಾಯ ಮಾಡಲಿಲ್ಲ. ರಾಜಕೀಯವಾಗಿ ನಮ್ಮಿಂದ ಸಣ್ಣಪುಟ್ಟ ತಪ್ಪುಗಳಾಗಿರಬಹುದು. ಈ ಜಿಲ್ಲೆಯ ಜನತೆಗೆ ಸ್ಪಷ್ಟವಾಗಿ ಮನವಿ ಮಾಡಲು ಬಯಸುತ್ತೇವೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ನಾನು ಸಿದ್ಧರಿದ್ದೇವೆ. ತಪ್ಪು ತಿದ್ದಿಕೊಳ್ಳಲು ಈ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಿ ಎಂದು ಮಾಜಿ ಮುಖ್ಯಮಂತ್ರಿಗಳು ಜಿಲ್ಲೆಯ ಜನರಲ್ಲಿ ಮನವಿ ಮಾಡಿಕೊಂಡರು.
ಸುಮಲತಾ ಅವರು ನನ್ನ ಸ್ವಂತ ಅಕ್ಕನಿದ್ದಂತೆ
ಅಂಬರೀಶ್ ಅವರೂ ನಾವೆಲ್ಲ ಒಟ್ಟಾಗಿ ಪ್ರೀತಿಯಿಂದ ಬೆಳೆದವರು. ನಮ್ಮ ಪಕ್ಷದಿಂದಲೇ ಅಂಬರೀಶ್ ಅವರು ಪಾರ್ಲಿಮೆಂಟ್ ಪ್ರವೇಶ ಮಾಡಿದ್ದರು. ವಿಧಿ ಆಟವೋ ಏನೋ ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಡಾ.ರಾಜಕುಮಾರ್ ಅವರು, ಅಂಬರೀಶ್ ಅವರು ನಿಧನರಾದರು. ಕಂಠೀರವ ಸ್ಟುಡಿಯೋದಲ್ಲಿ ರಾಜ್ ಅವರ ಸ್ಮಾರಕಕ್ಕೆ ಸ್ಥಳ ನೀಡಿದ್ದು ನಾನೇ. ಆ ಮೇರುನಟನ ಸ್ಮಾರಕದ ಸಮೀಪದಲ್ಲಿಯೇ ಅಂಬರೀಶ್ ಅವರ ಸ್ಮಾರಕಕ್ಕೂ ಜಾಗ ಗುರುತಿಸಿ, ಗೌರವ ಕೊಟ್ಟೆ. ಇದೆಲ್ಲವನ್ನೂ ಆ ದೇವರೇ ನನ್ನಿಂದ ಮಾಡಿಸಿದ್ದಾನೆ ಎಂದು ನಂಬಿದ್ದೇನೆ. ವಿಷ್ಣುವರ್ಧನ್ ಅವರ ಸ್ಮಾರಕ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳು ಸ್ಮರಣೆ ಮಾಡಿಕೊಂಡರು.
ರಾಜಕಾರಣದಲ್ಲಿ ಟೀಕೆ ಪ್ರತಿ ಟೀಕೆಗಳು ಇರುತ್ತವೆ. ಸುಮಲತಾ ಅವರು ನಾವು ಪರಸ್ವರ ಟೀಕೆ ಟಿಪ್ಪಣಿ ಮಾಡಿಕೊಂಡಿದ್ದೇವೆ. ಅದು ಮುಗಿದ ಅಧ್ಯಾಯ. ಅದು ಸಂಬಂಧಗಳಿಗೆ ಧಕೆ ತರುವಂಥದ್ದು ಬೇಡ. ಸುಮಲತಾ ಅವರು ನನ್ನ ಸ್ವಂತ ಅಕ್ಕ ಇದ್ದಂತೆ. ಸಂಘರ್ಷವನ್ನು ಮುಂದುವರಿಸಿಕೊಂಡು ಹೋಗಲ್ಲ. ಅದರ ಅಗತ್ಯವೂ ಇಲ್ಲ ಎಂದು ಕುಮಾರಸ್ವಾಮಿ ನೇರ ಮಾತುಗಳಲ್ಲಿ ಹೇಳಿದರು.
ಇದನ್ನೂ ಓದಿ: IPL ಮುಗಿಯುತ್ತಿದ್ದಂತೆ ಧೋನಿ ನಿವೃತ್ತಿ ಘೋಷಿಸುತ್ತಾರೆಯೇ? ಸ್ಪಷ್ಟನೆ ನೀಡಿದ ಇರ್ಫಾನ್ ಪಠಾಣ್
ಆಕಸ್ಮಿಕವಾಗಿ ನಾನು ರಾಜಕೀಯಕ್ಕೆ ಬಂದಿದ್ದು.
ಮಂಡ್ಯ ಜಿಲ್ಲೆಯ ಜನರ ಜತೆ ಮೊದಲಿಂದಲೂ ನಾನು ಇದ್ದೇನೆ. 2019ರಲ್ಲಿ ಇಲ್ಲಿ ಹೊಂದಾಣಿಕೆ ಎಂದು ಕುತ್ತಿಗೆ ಕುಯ್ದರು. ಅದಕ್ಕೆ ಉತ್ತರ ಕೊಡುವ ಶಕ್ತಿ ಮಂಡ್ಯ ಜನರ ಕೈಯಲ್ಲಿ ಇದೆ.ನನ್ನ ಜನ್ಮ ಭೂಮಿ ಹಾಸನ, ರಾಜಕೀಯ ಭವಿಷ್ಯ ನೀಡಿದ್ದು ರಾಮನಗರ. ನನ್ನ ಜೀವ ಮಿಡಿಯುವುದು ಮಂಡ್ಯಗಾಗಿ.
ಪಕ್ಷಕ್ಕಾಗಿ ನಿಸ್ವಾರ್ಥವಾಗಿ ದುಡಿಯುತ್ತಿರುವ ನಿಮ್ಮ ಆಸೆಗೆ ನಾವು ಭಂಗ ತರುವುದಿಲ್ಲ ಎಂದು ಮುಖಂಡರು, ಕಾರ್ಯಕರ್ತರಿಗೆ ಭರವಸೆ ನೀಡಿದ ಕುಮಾರಸ್ವಾಮಿ ಅವರು; ನಿಮ್ಮ ಆಸೆಗೆ ನಾವು ಭಂಗ ತರುವ ಕೆಲಸ ನಾನು ಮಾಡುವುದಿಲ್ಲ. ನಿಖಿಲ್ ಕುಮಾರಸ್ವಾಮಿ ಅವರಿಗೂ ಒಂದು ಮಾತು ಹೇಳುತ್ತೇನೆ. ನಿಮ್ಮ ಭಾವನೆಗಳಿಗೆ ಯಾವುದೇ ಕಾರಣಕ್ಕೂ ನಿರಾಸೆಯಾಗಲ್ಲ. ನಿಮ್ಮ ಆಸೆಯ ಪ್ರಕಾರ ಅದನ್ನು ನೇರವೇರಿಸಿಕೊಡುತ್ತೇನೆ. ಈ ತಿಂಗಳ 21ರಂದು ನನಗೆ ಹೃದಯದ ಶಸ್ತ್ರ ಚಿಕಿತ್ಸೆ ಇದೆ. 25ರಂದು ನಾನೇ ಬಂದು ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು, ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡರು, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಾಸಕ ಹೆಚ್.ಟಿ.ಮಂಜುನಾಥ್, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶಗೌಡ, ಡಾ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಪಕ್ಷದ ಜಿಲ್ಲಾಧ್ಯಕ್ಷ ರಮೇಶ್, ರಾಮಚಂದ್ರು, ಗುರುಚರಣ್, ಶಿವಕುಮಾರ್ ಸೇರಿ ಅನೇಕ ನಾಯಕರು ಉಪಸ್ಥಿತರಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.