ಕರ್ನಾಟಕಕ್ಕೆ ಸಿದ್ದರಾಮಯ್ಯ ಹೆಸರು ಇಡಲಿ : ಹೆಚ್ಡಿಕೆ ವ್ಯಂಗ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ರಸ್ತೆಗೆ ಮಾತ್ರವಲ್ಲ, ಮೈಸೂರಿಗೇ ಇಡಬೇಕು ಎಂದು ಶಾಸಕರೊಬ್ಬರು ಕೇಳಿದ ಪ್ರಶ್ನೆಗೆ ಕಟುವಾಗಿ ಉತ್ತರಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಮೈಸೂರಿಗೆ ಏಕೆ, ಇಡೀ ಕರ್ನಾಟಕಕ್ಕೆ ಇಟ್ಟುಬಿಡಿ ಎಂದು ಲೇವಡಿ ಮಾಡಿದರು.
ಮೈಸೂರು: ರಸ್ತೆಗೆ ತಮ್ಮ ಹೆಸರು ನಾಮಕರಣ ಮಾಡುವ ವಿಷಯ ವಿವಾದದ ಸ್ವರೂಪ ಪಡೆದುಕೊಂಡರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣಮೌನಕ್ಕೆ ಶರಣಾಗಿದ್ದಾರೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ.
ಮೈಸೂರಿನಲ್ಲಿ ಶನಿವಾರ ದಿಶಾ ಸಭೆಗೂ ಮೊದಲು ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು, ರಸ್ತೆಗೆ ತಮ್ಮ ಹೆಸರಿಡಬೇಕು ಎನ್ನುವ ಆಕಾಂಕ್ಷೆ ಬಹುಶಃ ಸಿಎಂ ಸಿದ್ದರಾಮಯ್ಯ ಅವರಿಗೆ ಇರಬಹುದು. ಅದಕ್ಕೆ ಅವರು ಜಾಣಮೌನಕ್ಕೆ ಶರಣಾಗಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಚಿತಾವಣೆ ಮಾಡುತ್ತಿದ್ದಾರೆ ಎಂದರು ಅವರು.
ಒಂದು ವೇಳೆ ಯಾವುದಾರೂ ರಸ್ತೆ ಅಥವಾ ಬಡಾವಣೆಗೆ ತಮ್ಮ ಹೆಸರು ಇಟ್ಟುಕೊಳ್ಳಬೇಕು ಎನ್ನುವ ಮನಸ್ಸಿದ್ದರೆ, ದೇವನೂರು ಬಡಾವಣೆಗೆ, ಕೆಸರೆ ಗ್ರಾಮಕ್ಕೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿಡಲಿ. ಅಲ್ಲಿಯೇ ಅಲ್ಲವೇ ಅವರು ಬಹುದೊಡ್ಡ ಸಾಧನೆ ಮಾಡಿರುವುದು ಎಂದು ಕೇಂದ್ರ ಸಚಿವರು ವ್ಯಂಗ್ಯವಾಡಿದರು.
ಇದನ್ನೂ ಓದಿ:ಸಿಎಂ ಸಿದ್ದು 'ಬಲ'ದಿಂದ ಡಿನ್ನರ್ ಹೆಸರಿನಲ್ಲಿ ಸಚಿವರ ಪ್ರತ್ಯೇಕ ಸಭೆ?!
ಕರ್ನಾಟಕಕ್ಕೆ ಸಿದ್ದರಾಮಯ್ಯ ಹೆಸರು ಇಡಲಿ : ಸಿದ್ದರಾಮಯ್ಯ ಅವರ ಹೆಸರನ್ನು ರಸ್ತೆಗೆ ಮಾತ್ರವಲ್ಲ, ಮೈಸೂರಿಗೇ ಇಡಬೇಕು ಎಂದು ಶಾಸಕರೊಬ್ಬರು ಕೇಳಿದ ಪ್ರಶ್ನೆಗೆ ಕಟುವಾಗಿ ಉತ್ತರಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಮೈಸೂರಿಗೆ ಏಕೆ, ಇಡೀ ಕರ್ನಾಟಕಕ್ಕೆ ಇಟ್ಟುಬಿಡಿ ಎಂದು ಲೇವಡಿ ಮಾಡಿದರು.
ಈಗಷ್ಟೇ 15% ಏರಿಕೆ ಮಾಡಿದ್ದಾರೆ, ಅದುವೇ ತಾನೇ ಇವರು ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ. ಮೈಸೂರು ರಾಜಮನೆತನ, ದೇವರಾಜ ಅರಸು ಅವರು ಬಹುದೊಡ್ಡ ಕೊಡುಗೆ ಕೊಟ್ಟಿದ್ದಾರೆ.. ಅದಕ್ಕೆ ಇವರ ಹೆಸರು ಇಡಬೇಕು ಎಂದು ಅವರು ಟಾಂಗ್ ಕೊಟ್ಟರು.
ಮೈಸೂರು ನಗರಕ್ಕೆ, ಇಡೀ ರಾಜ್ಯದ ಅಭಿವೃದ್ಧಿಗೆ ಯಾರು ಎಷ್ಟು ಕೊಡುಗೆ ಕೊಟ್ಟಿದ್ದಾರೆ ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಸರ್ಕಾರ ಮತ್ತು ಸಿದ್ದರಾಮಯ್ಯ ಅವರು ಒಡೆಯರ್ ಅವರ ಮನೆತನಕ್ಕೆ ಅಪಮಾನ ಮಾಡುತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ:ಶೇ. 15 ರಷ್ಟು ಬಸ್ ದರ ಹೆಚ್ಚಳ ಪರಿಷ್ಕರಣೆಗೆ ಸಚಿವ ಸಂಪುಟ ಅನುಮೋದನೆ
ರಸ್ತೆಯಲ್ಲಿ ಬಿಸಿಲಿನಲ್ಲಿ ನಿಂತು ಯಾಕೆ ಪ್ರತಿಭಟನೆ ಮಾಡುತ್ತೀರಾ ಎಂದು ಬಿಜೆಪಿ ಗೆಳೆಯರಿಗೆ ಕೇಳಿದ್ದೇನೆ. ಇಲ್ಲಿ ಸಿಎಂ ಅವರೇ ಚಿತಾವಣೆ ಮಾಡುತ್ತಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ. ಪ್ರಿನ್ಸೆಸ್ ರಸ್ತೆ ಬದಲಾವಣೆ ಮುನ್ನಲೆಗೆ ಬಂದಾಗಲೂ ಸಿಎಂ ಮೌನವಾಗಿದ್ದಾರೆ! ಅವರು ಜಾಣಮೌನ ವಹಿಸಿದ್ದಾರೆ. ಸುಖಾಸುಮ್ಮನೆ ಮಹಾರಾಜರ ಹೆಸರು ಇರುವ ರಸ್ತೆಯ ಹೆಸರು ತೆಗೆಯುವ ಬದಲು ಕೆಸರೆ ಗ್ರಾಮಕ್ಕೆ ಸಿದ್ದರಾಮಯ್ಯ ಅವರ ಹೆಸರನ್ನು ಇಟ್ಟರೆ ಆಯಿತು ಎಂದು ಕೇಂದ್ರ ಸಚಿವರು ತರಾಟೆಗೆ ತೆಗೆದುಕೊಂಡರು.
ಜನರ ಹೃದಯದಲ್ಲಿರಬೇಕು: ನಾನು ಈ ಹಿಂದೆ ಬಿಜೆಪಿ ಜತೆ ಸೇರಿ ಸರಕಾರ ಮಾಡಿದ್ದೆ. ಮುಖ್ಯಮಂತ್ರಿಯಾಗಿ ನಾನು ಮೈಸೂರಿಗೆ ಎಷ್ಟು ಕೊಡುಗೆ ನೀಡಿದ್ದೇನೆ? ಸಿದ್ದರಾಮಯ್ಯ ಅವರು ಡಿಸಿಎಂ ಆಗಿ, ಪ್ರತಿಪಕ್ಷ ನಾಯಕರಾಗಿ, ಎರಡು ಅವಧಿಗೆ ಸಿಎಂ ಆಗಿ ಏನು ಕೊಡುಗೆ ನೀಡಿದ್ದಾರೆ ಎನ್ನುವ ಬಗ್ಗೆ ಚರ್ಚೆ ನಡೆಯಲಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.
2006-2007ರಲ್ಲಿ ನಾನು ಮೈಸೂರಿಗೆ ಸಾಕಷ್ಟು ಅನುದಾನ ಕೊಟ್ಟಿದ್ದೇನೆ. ಎಷ್ಟು ಮನೆ ಮಂಜೂರು ಮಾಡಿದ್ದೇನೆ, ಎಷ್ಟು ರಾಜಕಾಲುವೆ ಅಭಿವೃದ್ಧಿ ಮಾಡಿದ್ದೇನೆ, ಜೆ ನರ್ಮ್ ಯೋಜನೆ ಮೂಲಕ ₹2000 ಕೋಟಿ ಅನುದಾನವನ್ನು ಮೈಸೂರಿಗೆ ತಂದಿದ್ದೇನೆ. ಅದೆಲ್ಲ ಮಾಡಿದ್ದು ನಾನೇ ಎಂದು ಎಲ್ಲಾದರೂ ಹೇಳಿದ್ದೇನೆಯೇ? ಅದಕ್ಕೆ ಹಾದಿಬೀದಿಗೆ ನನ್ನ ಹೆಸರು ಇಡಿ ಎಂದು ಕೇಳಲು ಆಗುತ್ತದೆಯೇ? ನಾವೇನು ಕೆಲಸ ಮಾಡಿದ್ದೇವೆ ಎಂಬ ಆತ್ಮತೃಪ್ತಿ ಇರಬೇಕು, ಅದು ಜನರ ಹೃದಯದಲ್ಲಿರಬೇಕು ಎಂದು ಕೇಂದ್ರ ಸಚಿವರು ತೀಕ್ಷ್ಣವಾಗಿ ಹೇಳಿದರು.
ಇದನ್ನೂ ಓದಿ:ಬಿಜೆಪಿ-ಕಾಂಗ್ರೆಸ್ ನಡುವೆ ಕಲಬುರಗಿ ರಿಪಬ್ಲಿಕ್ ವಾಗ್ಯುದ್ಧ
ಜನರ ಮೇಲೆ ಹೊರೆ ಬಿದ್ದಿದೆ, ಮಂತ್ರಿಗಳ ಮೇಲೆ ಬಿದ್ದಿಲ್ಲ : ರಾಜ್ಯ ಕಾಂಗ್ರೆಸ್ ಸರಕಾರ ಕೆಎಸ್ ಆರ್ ಟಿಸಿ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿರುವ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಪ್ರಯಾಣ ದರ ಹೆಚ್ಚಳದ ಹೊರೆ ಏನಿದ್ದರೂ ಜನಕ್ಕೆ ತಾನೇ, ಮಂತ್ರಿಗಳಿಗೆ ಅಲ್ಲವಲ್ಲ.. ಅವರಿಗೇನಾಗಬೇಕು? ಜನರ ಜೇಬಿಗೆ ಕೈ ಹಾಕಿ ಲೂಟಿ ಮಾಡುತ್ತಿದ್ದಾರೆ. ವೋಟು ಹಾಕಿ ಅಧಿಕಾರ ಕೊಟ್ಟ ಜನರಿಗೆ ಕಷ್ಟ ಕೊಟ್ಟು ಖುಷಿಪಡುತ್ತಿದ್ದಾರೆ. ಐದು ಗ್ಯಾರಂಟಿಗಳಿಗೆ ಈ ಸರಕಾರದ ಇಬ್ಬರು ಮಹನೀಯರು ಸಹಿ ಹಾಕಿದ್ದರು. ಸಿಎಂ ಸಿದ್ದರಾಮಯ್ಯ ಅವರೂ ಸಹಿ ಮಾಡಿದ್ದರು. ಇನ್ನೊಬ್ಬ ಮಹಾನ್ ವ್ಯಕ್ತಿ ಬಗ್ಗೆ ನಾನು ಮಾತನಾಡಲ್ಲ. ನಮ್ಮ ದೇಶದಲ್ಲಿ ಡಾ.ಮನಮೋಹನ್ ಸಿಂಗ್ ಅವರ ನಂತರ ಸಿದ್ದರಾಮಯ್ಯನವರೇ ದೊಡ್ಡ ಆರ್ಥಿಕ ತಜ್ಞರಲ್ಲವೇ..? ಅವರೂ ಗ್ಯಾರಂಟಿ ಕಾರ್ಡ್ ಮೇಲೆ ಸಹಿ ಹಾಕಿದ್ದಾರೆ. ಅವರ ಸರಕಾರದಲ್ಲಿ ಜನರ ಅಭಿವೃದ್ಧಿಯಾಗುವುದು ಬಿಟ್ಟು ಮಂತ್ರಿಗಳ ಅಭಿವೃದ್ದಿ ಆಗುತ್ತಿದೆ!! ಜನರ ಅಭಿವೃದ್ದಿ ಇವರಿಗೆ ಬೇಕಿಲ್ಲ. ಎಲ್ಲದಕ್ಕೂ ಪರ್ಸಂಟೇಜ್ ಕೇಳುತ್ತಾರೆ. ಆಶ್ರಯ ಮನೆಗಳಿಗೂ ವಿಧಾನಸೌಧದಲ್ಲಿ ವಸೂಲಿ ಶುರುವಾಗಿದೆ ಎನ್ನುವ ಮಾಹಿತಿ ಇದೆ ಎಂದು ಆರೋಪಿಸಿದರು.
ನಮ್ಮ ಶಾಸಕರು ಒಗ್ಗಟ್ಟಾಗಿದ್ದಾರೆ: ಅಪರೇಷನ್ ಹಸ್ತದ ವಿಚಾರ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ ಅವರು; ಅದು ನಡೆಯುತ್ತಲೇ ಇದೆ. ನಮ್ಮ ಪಕ್ಷದಲ್ಲಿ 18 ಶಾಸಕರಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಒಟ್ಟಿಗೆ ಇದ್ದಾರೆ. ಅದನ್ನೇ ಶಾಸಕ ಹರೀಶ್ ಗೌಡ ಹೇಳಿದ್ದಾರೆ. ಬೆಳಗಾವಿಯಲ್ಲಿ ಶಾಸಕರು ಕೂತು ಮಾತನಾಡಿದ್ದಾರೆ. ನಮ್ಮ ಶಾಸಕರು ನಮ್ಮ ಜೊತೆ ಇರುತ್ತಾರೆ ಎಂದರು.
ಇದನ್ನೂ ಓದಿ:ಸರ್ಕಾರಿ ಬಸ್ ಪ್ರಯಾಣ ದರ ಇನ್ಮುಂದೆ ಕಾಸ್ಟ್ಲಿ: ಶೇ 15ರಷ್ಟು ದರ ಹೆಚ್ಚಳ ಪರಿಷ್ಕರಣೆಗೆ ಸಚಿವ ಸಂಪುಟ ಅನುಮೋದನೆ
ಮನೆ ಎಂದ ಮೇಲೆ ಮುನಿಸು ಇರೋದಿಲ್ಲವೇ? ಎಂದ ಕೇಂದ್ರ ಸಚಿವರು; ಶಾಸಕ ಜಿ.ಟಿ.ದೇವೇಗೌಡರ ನಡುವಿನ ಮುನಿಸು ಗಂಡ ಹೆಂಡತಿಯ ಮುನಿಸು. ಗಂಡ- ಹೆಂಡತಿ ಜಗಳ ಉಂಡು ಮಲಗುವ ತನಕ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.
ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆದಿಲ್ಲ. ಇನ್ನು ನಮ್ಮ ಪಕ್ಷದಲ್ಲಿ ಸಾಂಸ್ಥಿಕ ಚುನಾವಣೆಗಳು ನಡೆಯಬೇಕು. ಆ ನಂತರ ರಾಜ್ಯಾಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.