ಬೆಂಗಳೂರು: ಮಾಜಿ ಸಚಿವ ಎಚ್.ಡಿ.ರೇವಣ್ಣರ ಬಂಧನ ರಾಜಕೀಯ ಪ್ರೇರಿತ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದು, ಇದೆಲ್ಲದರ ಹಿಂದೆ ದೊಡ್ಡ ತಿಮಿಂಗಿಲವೇ ಇದೆ ಎಂದು ಗುಡುಗಿದ್ದಾರೆ. ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಕಳಂಕ ತರಲು ಈ ರೀತಿ ಮಾಡಿದ್ದಾರೆ ಅಂತಾ ನೇರವಾಗಿ ಆರೋಪಿಸಿದ್ದಾರೆ


COMMERCIAL BREAK
SCROLL TO CONTINUE READING

ವಕೀಲರಾದ ದೇವರಾಜೇಗೌಡರನ್ನು ಈಗ ಒಂದು ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಿದ್ದು ಯಾಕೆ? ಒಂದು ತಿಂಗಳಿನಿಂದ ಏನೆಲ್ಲಾ ಬೆಳವಣಿಗೆ ಆಯಿತು? ಆಡಿಯೋ ಮೂಲಕ ಸಿಕ್ಕಿಬಿದ್ದ ದೊಡ್ಡ ತಿಮಿಂಗಲವನ್ನು ಬಿಟ್ಟು ದೇವರಾಜೇಗೌಡರನ್ನು ಬಂಧನ ಮಾಡಿದ್ದಾರೆ! ಎಂದು ಎಚ್‌ಡಿಕೆ ಕಿಡಿಕಾರಿದರು. 


ವಿಡಿಯೋದಲ್ಲಿ ಬಂದಂತಹ ಮಹಿಳೆಯರ ಕುಟುಂಬಗಳ ಬಗ್ಗೆ ಸರ್ಕಾರಕ್ಕೆ ಅನುಕಂಪ‌ ಎನ್ನುವುದು ಇದೆಯಾ? ಈ ಪ್ರಕರಣಕ್ಕೆ ಸಂಬಂಧಿಸಿ ನಾನು ಯಾರನ್ನೂ ವಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಮಾಹಿತಿ ತಂತ್ರಜ್ಞಾನದ ಈ ಕಾಲದಲ್ಲಿ ಅಪರಾಧಿ ನಿರಪರಾಧಿ ಆಗುತ್ತಾನೆ. ಸರ್ಕಾರಕ್ಕೆ ಬದ್ಧತೆ ಇದ್ದರೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಿ. ಅದನ್ನು ಬಿಟ್ಟು ರೇವಣ್ಣ ಸುತ್ತ ತನಿಖೆ ಗಿರಕಿ ಹೊಡೆಯುವ ಅಗತ್ಯವಿಲ್ಲ. ಕುಮಾರಸ್ವಾಮಿ ಅವರು ರೇವಣ್ಣ ಕುಟುಂಬವನ್ನು ಮುಗಿಸಲು ನೋಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ನ್ಯಾಯದ ಪರ ಇದ್ದೇನೆ, ನೊಂದ ಮಹಿಳೆಯರ ಪರ ಇದ್ದೇನೆ ಅಂತಾ ಎಚ್‌ಡಿಕೆ ಸ್ಪಷ್ಟಪಡಿಸಿದರು. 


ಇದನ್ನೂ ಓದಿಕಿಡ್ನಾಪ್ ಪ್ರಕರಣದಲ್ಲಿ ರೇವಣ್ಣಗೆ ಜಾಮೀನು : ಶುಭ ಗಳಿಗೆಯಲ್ಲಿಯೇ ಜೈಲಿನಿಂದ ಬಿಡುಗಡೆ


ನೊಂದ ಮಹಿಳೆಯರಿಗೆ ಹೆದರಿಸಿದ್ದು ಯಾರು?: ಆ ಮಹಿಳೆಯರಿಗೆ ನ್ಯಾಯ ಸಿಗುವಂತೆ ಆಗಬೇಕು. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಓರ್ವ ನೊಂದ ಮಹಿಳೆ ದೂರು ಕೊಟ್ಟಿದ್ದಾರೆ. ಆ ಹೆಣ್ಣುಮಗಳಿಗೆ ಹೆದರಿಸಿ‌ ಅವರಿಂದ ದೂರು ಪಡೆಯಲು ಪ್ರಯತ್ನ ಮಾಡಿದ್ದಾರೆ. ಅವರಿಗೆ ಹೆದರಿಸಿ ಬೆದರಿಸಿದವರು ಯಾರು? ಮಫ್ತಿಯಲ್ಲಿ ಅವರ ಮನೆ ಬಳಿ ಹೋಗಿ ಹೆದರಿಸಿದ್ದು ಯಾರು? ಇದೆಲ್ಲಾ SITಗೆ ಗೊತ್ತಾ? ಕೆಲವೇ ದಿನಗಳಲ್ಲಿ ಇದೆಲ್ಲಾ ಹೊರಗೆ ಬರಲಿದೆ. ಮಹಿಳೆಯರಿಗೆ ಬೆದರಿಸಿದ್ದು, ಧಮ್ಕಿ ಹಾಕಿದ್ದು ಎಲ್ಲವೂ ಆಚೆ ಬರಲಿದೆ. ಇದರ ಬಗ್ಗೆ ಏನು ಕ್ರಮ ತಗೊಂಡಿದ್ದೀರಿ ಗೃಹ ಸಚಿವರೇ? ಅಂತಾ ಡಾ.ಜಿ.ಪರಮೇಶ್ವರ್ ಅವರನ್ನು ನೇರವಾಗಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ‌ 


ಪೆನ್‌ಡ್ರೈವ್ ಹಂಚಿದವರು ಎಲ್ಲಿ?: ಹಾಸನದಲ್ಲಿ ಪೆನ್‌ಡ್ರೈವ್‌ಗಳನ್ನು ಹಂಚಿರುವ ವ್ಯಕ್ತಿಗಳು ಎಲ್ಲಿ? FIR ದಾಖಲಾಗಿರುವ ಒಬ್ಬ ವ್ಯಕ್ತಿಯನ್ನೂ SIT ಹಿಡಿಯಲಿಲ್ಲ. ವಿಡಿಯೋಗಳನ್ನು ಮೊದಲು ಕದ್ದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣನಾದ ಕಾರು ಚಾಲಕನನ್ನು ಇದುವರೆಗೂ ತನಿಖಾ ತಂಡ ಬಂಧಿಸಿಲ್ಲ ಯಾಕೆ? ಆದರೆ, ಖಾಸಗಿ ಚಾನಲ್‌ನಲ್ಲಿ ಒಂದೂವರೆ ಗಂಟೆ ಕಾಲ ಕೂರಿಸಿಕೊಂಡು ಅವನನ್ನು ಸಂದರ್ಶನ ಮಾಡುತ್ತಾರೆ. SIT ತಂಡಕ್ಕೆ ಸಿಗದ ಆ ವ್ಯಕ್ತಿ ಸುಲಭವಾಗಿ ಖಾಸಗಿ ಚಾನೆಲ್‌ಗೆ ಸಿಗುತ್ತಾನೆ ಎಂದರೆ ಇಲ್ಲಿ ಏನ್ ನಡೆಯುತ್ತಿದೆ? ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ. 


ನವೀನ್ ಗೌಡ ಎಲ್ಲಿ?: ಇನ್ನೇನು ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳು ಹೊರಬರುತ್ತವೆ ಎಂದು ಫೇಸ್‌ಬುಕ್ಕಿನಲ್ಲಿ ಸಮಯದ ಸಮೇತ ಪೋಸ್ಟ್ ಹಾಕಿದ್ದ ನವೀನ್ ಗೌಡ ಎನ್ನುವ ವ್ಯಕ್ತಿ ನಮ್ಮ ಪಕ್ಷದ ಶಾಸಕರಿಗೆ ಪೆನ್‌ಡ್ರೈವ್ ಕೊಟ್ಟಿದ್ದೇನೆ ಎಂದು ಹೇಳಿದ್ದಾನೆ. ಅವನು ಏನೆಲ್ಲಾ ಹೇಳಿದ್ದಾನೆ, ಸಾಮಾಜಿಕ ಜಾಲತಾಣಗಳಲ್ಲಿ ಏನೆಲ್ಲಾ ಪೋಸ್ಟ್ ಮಾಡಿದ್ದಾನೆ ಎನ್ನುವುದು SITಗೆ ಗೊತ್ತಿಲ್ಲವೇ? ಅವನನ್ನು ಹಿಡಿದ್ರಾ? ಬಿಜೆಪಿಯ ಮಾಜಿ ಶಾಸಕರೊಬ್ಬರ ಎಡಬಲದಲ್ಲಿ ಇದ್ದ ಇಬ್ಬರನ್ನು ಹಿಡಿಯಲಾಗಿದೆ ಎಂಬುದನ್ನು ಮಾಧ್ಯಮಗಳಲ್ಲಿ ಗಮನಿಸಿದೆ. ಇನ್ನೊಂದು ವಾರದಲ್ಲಿ ಮುಖ್ಯವಾದವರನ್ನು ಹಿಡಿಯಲಾಗುತ್ತದೆ ಎಂದು ಕಾಂಗ್ರೆಸ್ ಶಾಸಕರು ಹೇಳಿದ್ದಾರೆ. ಹಾಗಾದರೆ, SITಟಿ ತನಿಖೆಯ ಎಲ್ಲಾ ಅಂಶಗಳು ಇವರಿಗೆ ಹೇಗೆ ಸೋರಿಕೆ ಆಗುತ್ತಿವೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.


SIT ಅಧಿಕಾರಿಗಳಿಗೆ ಎಚ್‌ಡಿಕೆ ಕಿವಿಮಾತು!: ನಾನು SIT ಅಧಿಕಾರಿಗಳಿಗೆ ಒಂದು ಮಾತು ಹೇಳಲು ಇಚ್ಛಿಸುತ್ತೇನೆ. ತಮಗೂ ತಂದೆ-ತಾಯಿ ಜನ್ಮ ಕೊಟ್ಟಿದ್ದಾರೆ. ಅಕ್ಕ-ತಂಗಿ ಎಲ್ಲರೂ ನಿಮಗೂ ಇರುತ್ತಾರೆ. ದಯಮಾಡಿ ಪ್ರಾಮಾಣಿಕವಾಗಿ ತನಿಖೆ ನಡೆಸಿ. ಚುನಾವಣೆ ಸಂದರ್ಭದಲ್ಲಿ ಪೆನ್‌ಡ್ರೈವ್ ಹಂಚಿ ಅಶ್ಲೀಲ ದೃಶ್ಯಗಳ ಮೂಲಕ ಸಮಾಜದಲ್ಲಿ ಕೆಟ್ಟ ಪರಿಸ್ಥಿತಿಯನ್ನು ಸೃಷಿ ಮಾಡಿದರಲ್ಲ, ಅವರನ್ನು ಇಲ್ಲಿಯವರೆಗೆ ನೀವು ಮುಟ್ಟಿಲ್ಲ. ಘಟನೆಗೆ ಕಾರಣನಾದ ವ್ಯಕ್ತಿಯನ್ನೂ ಹಿಡಿಯಲಿಲ್ಲ. ಇದೆಲ್ಲವನ್ನೂ ಮಾಡಬೇಕಾದ್ದು ಸರ್ಕಾರದ ಜವಾಬ್ದಾರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. 


ಪಟಾಕಿ ಸಿಡಿಸಿ ಸಂಭ್ರಮಿಸುವ ಸಮಯ ಇದಲ್ಲ!: ರಾಜ್ಯದಲ್ಲಿ ಅತ್ಯಂತ ಹೀನಾಯ ಘಟನೆ ನಡೆದಿದೆ. ಎಚ್.ಡಿ.ರೇವಣ್ಣ ಕೂಡ ಆರೋಪ ಎದುರಿಸಬೇಕಾಯಿತು. ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ. ನಮ್ಮ ಪಕ್ಷದ ಕಾರ್ಯಕರ್ತರಿಗೂ ಹೇಳಬಯಸುತ್ತೇನೆ. ಇದು ಪಟಾಕಿ ಸಿಡಿಸಿ ಸಂತೋಷಪಡುವ ಸಮಯ ಅಲ್ಲ. ಇಡೀ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾದಾಗ ಸಂಭ್ರಮಿಸಿ. ಈ ಘಟನೆ ರಾಜ್ಯವೇ ತಲೆ ತಗ್ಗಿಸುವಂತಹ ಘಟನೆ ಎಂದು ಹೇಳಿದರು.  


ಇದನ್ನೂ ಓದಿ: ಬಿಜೆಪಿ ನಾಯಕರೇ, ನಮ್ಮ ಸರ್ಕಾರದ ಚಿಂತೆ ಬಿಡಿ ಅದು ಐದು ವರ್ಷ ಸುಭದ್ರವಾಗಿದೆ: ಸಿಎಂ ಸಿದ್ದರಾಮಯ್ಯ


ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆ: ವಿಧಾನ ಪರಿಷತ್ ಚುನಾವಣೆಯ ಒಂದು ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಆಗಬೇಕಿದ್ದು, ನಾಡಿದ್ದು ಸಭೆ ನಡೆಸಿ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಇದೇ ವೇಳೆ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.