ಜೆಡಿಎಸ್ ಪಕ್ಷದ ಅಧಿಕೃತ ವೆಬ್‌ಸೈಟ್ ಬಿಡುಗಡೆ ಮಾಡಿದ ಹೆಚ್‌ಡಿಡಿ
ನಾವು ಸ್ವಲ್ಪ ಹಿಂದೆ ಇದ್ದೆವು, ಆದರೆ ಇವಾಗ ಹೊಸದೊಂದು ಯೋಜನೆ ಮಾಡಿದ್ದೇವೆ: ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ವೆಬ್‌ಸೈಟ್ ಅನ್ನು ಬಿಡುಗಡೆ ಮಾಡಿದ ನಂತರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
ಬೆಂಗಳೂರು: ಪ್ರಥಮ ಬಾರಿಗೆ ಜಾತ್ಯಾತೀತ ಜನತಾ ದಳ(ಜೆಡಿಎಸ್) ಪಕ್ಷದ ಅಧಿಕೃತ ವೆಬ್‌ಸೈಟ್ www.janatadals.com ಬಿಡುಗಡೆ ಮಾಡಲಾಗಿದೆ. ಜೆಡಿಎಸ್ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ನಗರದ ಜೆಪಿ ಭವನದಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ವೆಬ್‌ಸೈಟ್ ಅನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಹೆಚ್‌ಡಿಡಿ, ಪಕ್ಷದ ವೆಬ್‌ಸೈಟ್‌ನ್ನು ಪ್ರಥಮ ಬಾರಿಗೆ ಪ್ರಾರಂಭ ಮಾಡಿದ್ದೇವೆ. ಈ ಹಿಂದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಅವರೇ ಸ್ವತಃ ಒಂದು ವೆಬ್‌ಸೈಟ್ ಇಟ್ಟುಕೊಂಡಿದ್ದರು. ಇಂದು ಪಕ್ಷದಿಂದ ಅಧೀಕೃತವಾಗಿ ವೆಬ್‌ಸೈಟ್ ಅನ್ನು ಉದ್ಘಾಟನೆ ಮಾಡಲಾಗಿದೆ. ಇದರಿಂದ ಪಕ್ಷದ ಕಾರ್ಯಕ್ರಮಗಳ ಕುರಿತಾದ ಪ್ರಚಾರಕ್ಕೆ ಅನುಕೂಲವಾಗಲಿದೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜನತೆಯೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.
ಈ ವೆಬ್‌ಸೈಟ್ ಪಕ್ಷದ ಹೆಸರಿನಲ್ಲಿ ನಡೆಯಲಿದೆ, ಇದರಲ್ಲಿ ಯಾವುದೇ ನೂನ್ಯತೆಗಳಿಲ್ಲ ಎಂದು ತಿಳಿಸಿದ ದೇವೇಗೌಡರು, ಪಕ್ಷದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ಅವರಿಗೆ ಇದರ ಜವಾಬ್ದಾರಿ ನೀಡಲಾಗಿದೆ. ಕಾರ್ಯಕರ್ತರ ಯಾವುದೇ ಸಮಸ್ಯೆ ಇದ್ರೂ ಪಕ್ಷದ ನಿಲುವಿನ ಬಗ್ಗೆ ಹೊಸ ವ್ಯವಸ್ಥೆಯಿಂದ ಬಳಕೆ ಮಾಡಿಕೊಳ್ಳಬಹುದು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ವೆಬ್‌ಸೈಟ್ ಮೂಲಕ ಪಕ್ಷದ ಸಂಘಟನೆ:
ನಾವು(ಜೆಡಿಎಸ್ ಪಕ್ಷ) ಸ್ವಲ್ಪ ಹಿಂದೆ ಇದ್ದೆವು, ಆದರೆ ಇವಾಗ ಹೊಸದೊಂದು ಯೋಜನೆ ಮಾಡಿದ್ದೇವೆ. ಇದರಲ್ಲಿ ಅನುಭವ ಇರುವ ಸಿಬ್ಬಂದಿಗಳು ಇರುತ್ತಾರೆ. ಹೀಗಾಗಿ ಇದರಿಂದ ಪಕ್ಷದ ಸಂಘಟನೆಗೆ ಅನುಕೂಲ ಆಗಲಿದೆ ಎಂದು ಹೆಚ್‌ಡಿಡಿ ವಿಶ್ವಾಸ ವ್ಯಕ್ತಪಡಿಸಿದರು.