ಬೆಂಗಳೂರು: ರಾಜ್ಯದ ಕರಾವಳಿ, ಕೊಡಗು ಮತ್ತು ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ನದಿ ಪಾತ್ರಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಜನರಿಗೆ ಎಚ್ಚರಿಗೆ ನೀಡಲಾಗಿದೆ. ಅಲ್ಲದೆ, ರಕ್ಷಣಾ ಪಡೆಗಳನ್ನು ಅಲರ್ಟ್ ಮಾಡಲಾಗಿದ್ದು, ರಾಷ್ಟ್ರೀಯ ಭದ್ರತಾ ರಕ್ಷಣಾ ಪಡೆಯ 30 ಮಂದಿ ತಂಡ ಇಂದು ಮಂಗಳೂರಿಗೆ ಆಗಮಿಸಿದೆ. 


COMMERCIAL BREAK
SCROLL TO CONTINUE READING

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಪಟ್ಟಣದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಮಂಗಳೂರು ಜಿಲ್ಲೆಯ ಹಲವು ತಾಲ್ಲೂಕುಗಳು, ಉಡುಪಿ ಜಿಲ್ಲೆಯ ಕಾರವಾರ, ಹೆಬ್ರಿ ಮೊದಲಾದ ಕಡೆಗಳಲ್ಲಿ, ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ, ಕಾಫಿನಾಡು ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಸಹ ಧಾರಾಕಾರ ಮಳೆಯಾಗುತ್ತಿದೆ.


ಭಾರಿ ಮಳೆಯಿಂದಾಗಿ 3 ಸಾವು
ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಗೋಡೆ ಕುಸಿದು ಅಜ್ಜಿ ಹಾಗೂ ಮೊಮ್ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೆ, ಚಿಕ್ಕಮಗಳೂರು ಜಿಲ್ಲೆಯ ಗೋಣಿಬೈಲಿನಲ್ಲಿ ಶನಿವಾರ ಕೃಷಿ ಹೊಂಡಕ್ಕೆ ಬಿದ್ದು ರೈತರೊಬ್ಬರು ಮೃತಪಟ್ಟಿದ್ದಾರೆ. ಕುಮಾರಧಾರಾ, ತುಂಗಾ, ಭದ್ರಾ, ನೇತ್ರಾವತಿ, ಶರಾವತಿ, ಅಘನಾಶಿನಿ ಸೇರಿದಂತೆ ಈ ಭಾಗದ ನದಿಗಳಲ್ಲಿ ನೆರೆ ಬಂದಿದ್ದು, ಶೃಂಗೇರಿಯ ಕಪ್ಪೆಶಂಕರ ಮತ್ತೆ ಜಲಾವೃತವಾಗಿದೆ.


ಅಣೆಕಟ್ಟೆಗಳಲ್ಲಿ ನೀರಿನ ಮಟ್ಟ ಹೆಚ್ಚಳ
ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಿದ್ದು, ಜಲಾಶಯದ ಮಟ್ಟ 108 ಅಡಿಗಳಿಗೆ ಏರಿದೆ. ಕೇರಳದ ವೈನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯ ಭರ್ತಿಯಾಗಿದೆ (ಗರಿಷ್ಠ 2284 ಅಡಿ). ಕಾವೇರಿ ಕಣಿವೆಯ ಅತಿ ಚಿಕ್ಕ ಜಲಾಶಯ, ಹಾರಂಗಿ (2859 ಅಡಿ)ಗೆ 25 ಸಾವಿರ ಕ್ಯೂಸೆಕ್‌ ಒಳ ಹರಿವು ಬರುತ್ತಿದ್ದು, ಜಲಾಶಯದ ಮಟ್ಟ 56.46 ಅಡಿಗೆ ತಲುಪಿದೆ. 


ಇನ್ನೂ 2-3 ದಿನ ರಾಜ್ಯದಲ್ಲಿ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವುದರಿಂದ ಇಲಾಖೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಲ್ಲಿನ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.