ಬೆಂಗಳೂರು: ಕಳೆದ ದಿನ ಸುರಿದ ಧಾರಾಕಾರ ಮಳೆಗೆ ರಾಜ್ಯದ ಕರಾವಳಿ ಜಿಲ್ಲೆ ಸೇರಿದಂತೆ ಅನೇಕ ಕಡೆ ಜನರು ತತ್ತರಿಸಿ ಹೋಗಿದ್ದಾರೆ. ಕೊಪ್ಪಳ, ವಿಜಯಪುರ, ಕೊಡಗು, ದಕ್ಷಿಣ ಕನ್ನಡ ಸೇರಿದಂತೆ ಅನೇಕ ಭಾಗಗಳಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಸಮಸ್ಯೆಗಳು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೆಡೆ ಶಾಲೆ, ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ. 


COMMERCIAL BREAK
SCROLL TO CONTINUE READING

ಕೊಪ್ಪಳ ಜಿಲ್ಲಾದ್ಯಂತ ಆರಂಭವಾದ ಮಳೆ: 
ಇಂದು ಬೆಳಗ್ಗೆ 6 ಗಂಟೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಮಳೆ ಆರಂಭವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಜಾಗೃತಾ ಕ್ರಮ ವಹಿಸಿಕೊಂಡ ಶಿಕ್ಷಣ ಇಲಾಖೆ ಶಾಲೆ- ಕಾಲೇಜು, ಅಂಗನವಾಡಿ ಕೇಂದ್ರಕ್ಕೆ ರಜೆ ಘೋಷಣೆ ಮಾಡಿದೆ. ಸ್ಥಳೀಯ ಪರಿಸ್ಥಿತಿ ನೋಡಿಕೊಂಡು ರಜೆ ಘೋಷಣೆ ಮಾಡಿ ಎಂದು ಡಿಡಿಪಿಐ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ‌ ನಿರ್ದೇಶಕರಿಗೆ ಕೊಪ್ಪಳ ಜಿಲ್ಲಾಧಿಕಾರಿ ಸುಂದರೇಶ ಬಾಬು ಮೌಖಿಕ ಸೂಚನೆ ನೀಡಿದ್ದಾರೆ.


ಇದನ್ನೂ ಓದಿ: ಇಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಇನ್ಫಿನಿಕ್ಸ್ ನ ಅದ್ಭುತ ಸ್ಮಾರ್ಟ್‌ಫೋನ್


ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆ ಆರ್ಭಟ: 
ಇನ್ನು ಮಳೆಗಾಲದಲ್ಲಿ ಅನೇಕ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುವ ಕೊಡಗಿನಲ್ಲಿ ಈ ಬಾರಿಯೂ ಭಾರೀ ಮಳೆಯಾಗಿದೆ. ಕೊಯನಾಡು ಸಂಪಾಜೆ ವ್ಯಾಪ್ತಿಯಲ್ಲಿ ರಾತ್ರಿಯಿಂದ ಭಾರಿ‌ ಮಳೆ ಸುರಿದಿದ್ದು, ಪಯಸ್ವಿನಿ ನದಿ ಉಕ್ಕಿ ಹರಿದಿದೆ. ಪರಿಣಾಮ ಕೊಯನಾಡುವಿನಲ್ಲಿ ಕೆಲವು ಮನೆಗಳು ಜಲಾವೃತಗೊಂಡಿದೆ. ಇನ್ನು ಕೊಯನಾಡು ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಹರಿವಿಗೆ ಅಡಚಣೆ ಉಂಟಾಗಿದೆ. ಮನೆ ಜಲಾವೃತಗೊಂಡು ಸಮಸ್ಯೆ ಎದುರಿಸಿದ ಸಂತ್ರಸ್ತರು ಸಮೀಪದ ಸುರಕ್ಷಿತ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದಾರೆ. ಸದ್ಯ ಸಂತ್ರಸ್ತರನ್ನು ಕಾಳಜಿ ಕೇಂದ್ರಕ್ಕೆ ವರ್ಗಾಯಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇನ್ನೊಂದೆಡೆ ಕರ್ತೋಜೆ ಎಂಬಲ್ಲಿನ ಹೆದ್ದಾರಿಗೆ ಕೆಸರು ನೀರು ನುಗ್ಗಿದೆ. ಸದ್ಯ ಕಿಂಡಿ ಅಣೆಕಟ್ಟು ಪ್ರದೇಶಕ್ಕೆ ಜಿಲ್ಲಾಧಿಕಾರಿ, ಎನ್‌ಡಿಆರ್‌ಎಫ್ ತಂಡ ಭೇಟಿ ನೀಡಿದೆ.  


ದಕ್ಷಿಣ ಕನ್ನಡದಲ್ಲಿ ಭಾರೀ ದುರಂತ: 
ದಕ್ಷಿಣ ಕನ್ನಡ ಜಿಲ್ಲೆ ಕಲ್ಲುಗುಂಡಿ ಬಳಿಯ ಮಂಗಳೂರು - ಮಡಿಕೇರಿ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿದ್ದು ಪರಿಣಾಮ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಇನ್ನು ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೆರೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮುಂದಿನ 2  ದಿನಗಳ ಕಾಲ ಹೊರ ಜಿಲ್ಲೆಗಳ ಭಕ್ತರು ದೇವಾಲಯಕ್ಕೆ ಭೇಟಿ ನೀಡದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮನವಿ ಮಾಡಿದೆ. ಈಗಾಗಲೇ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ. ಅಲ್ಲದೇ ಆದಿ ಸುಬ್ರಹ್ಮಣ್ಯ ದೇವಾಲಯಕ್ಕೆ ನೀರು ನುಗ್ಗಿದ್ದು ನಾಗರ ಪಂಚಮಿಯ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇಂದು ಮತ್ತು ನಾಳೆ ಭೇಟಿ ನೀಡದಂತೆ ಜಿಲ್ಲಾಡಳಿತ ಮನವಿ ಮಾಡಿದೆ.


ಇನ್ನು ಭಾರೀ ಮಳೆ ಹಿನ್ನಲೆಯಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಕಡಬ, ಸುಳ್ಯ ತಾಲೂಕಿನಲ್ಲಿ ನಿನ್ನೆಯಿಂದ ಮಳೆ ಸುರಿಯುತ್ತಿದೆ. ಸುಬ್ರಹ್ಮಣ್ಯ ಭಾಗದಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ನಿನ್ನೆ ರಾತ್ರಿನೇ ಕಡಬಕ್ಕೆ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ.ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 


ವಿಜಯನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆ: 
ಹೊಸಪೇಟೆ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಬೆಳ್ಳಂ- ಬೆಳಗ್ಗೆ ಮನೆಯಿಂದ ಹೊರಬರಲಾಗದೆ ಜನರು ಪರದಾಟ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿಯೂ ಭಾರಿ ಮಳೆಯಾಗಿದ್ದು, ಧಾರಾಕಾರ ಮಳೆಗೆ ರಾಯರಾಳು ತಾಂಡದ 30 ಕ್ಕೂ ಅಧಿಕ‌ ಮನೆಗಳು ಜಲಾವೃತವಾಗಿದೆ. ಮನೆಯಲ್ಲಿನ ಸಾಮಾಗ್ರಿಗಳೆಲ್ಲಾ ನೀರುಪಾಲಾಗಿದ್ದು, ಜನರು ಕಂಗಾಲಾಗಿದ್ದಾರೆ. ಇನ್ನು ನಸುಕಿನ ಜಾವ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೊಸಪೇಟೆ ತಾಲೂಕಿನ ಗರಗ ನಾಗಲಾಪುರದಲ್ಲೂ ಮಳೆಯಾಗುತ್ತಿದ್ದು, ಗ್ರಾಮಕ್ಕೆ ನೀರು ನುಗ್ಗಿದೆ. ಸದ್ಯ ಬ್ಯಾಲಕುಂದಿ ಗ್ರಾಮದ ಕರೆ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಹೊರಕ್ಕೆ ಹಾಕಲಾಗಿದೆ. ಇದರಿಂದಾಗಿ ಗ್ರಾಮಕ್ಕೆ ನೀರು ಒಮ್ಮೆಲೆ ಹರಿದು ಬಂದಿದೆ. 


ಇದನ್ನೂ ಓದಿ: ಉಚಿತ ಪಡಿತರ ಪಡೆಯುವವರಿಗೆ ಶಾಕಿಂಗ್ ! ಫ್ರೀ ರೇಶನ್ ನಿಲ್ಲಿಸಲು ಸರ್ಕಾರ ಚಿಂತನೆ


ಕಲಬುರಗಿ ಜಿಲ್ಲೆಯ ಹಲವೆಡೆ ಭಾರಿ ಮಳೆ: 
ಕಲಬುರಗಿಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಆಳಂದ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ನಿಂಬರಗ- ಸ್ಟೇಷನ್ ಗಾಣಗಾಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನು ಹಳ್ಳ ದಾಟಲು ಹೋದ ವ್ಯಕ್ತಿಯೋರ್ವ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ. ಆತನನ್ನು ಸ್ಥಳೀಯರು ರಕ್ಷಿಸಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.