ಬೆಂಗಳೂರು: ಸೋಮವಾರ ರಾತ್ರಿಯಿಂದಲೂ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ  ಭಾರೀ ಮಳೆಯಾಗುತ್ತಿದ್ದು, ಮುಂದಿನ ಕೆಲ ಗಂಟೆಗಳು ಮಳೆ ಇನ್ನೂ ತೀವ್ರಗೊಳ್ಳಲಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ನೀಡಿದೆ. 


COMMERCIAL BREAK
SCROLL TO CONTINUE READING

ರಾಜಧಾನಿ ಬೆಂಗಳೂರು, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ ಸೇರಿ ಹಳೇ ಮೈಸೂರು ಭಾಗದಲ್ಲಿ ಮಳೆ ಅಬ್ಬರಿಸಿದ್ದು, ಸಾಕಷ್ಟು ಹಾನಿ ಉಂಟು ಮಾಡಿದೆ. ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ರಾಜ್ಯದಲ್ಲೇ ಅಧಿಕ, 7 ಸೆಂ.ಮೀ. ಮಳೆ ಸುರಿಯಿತು.


ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿ 9 ಗಂಟೆ ಬಳಿಕ ಪ್ರಾರಂಭವಾದ ಮಳೆ ವಿಧಾನಸೌಧ, ಆಡುಗೋಡಿ, ಜೆಪಿ ನಗರ, ಶಾಂತಿ ನಗರ, ಮೆಜೆಸ್ಟಿಕ್ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ವರುಣನ ಅಬ್ಬರದಿಂದಾಗಿ, ವಾಹನ ಸವಾರರು ಪರದಾಡುವಂತಾಗಿದೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗರು ತೀವ್ರ ತೊಂದರೆ ಎದುರಿಸುವಂತಾಗಿದೆ.


ಲಗ್ಗೆರೆ, ಮೂಡಲಪಾಳ್ಯ, ಯಶವಂತಪುರ ರೈಲು ನಿಲ್ದಾಣ, ಜೆ.ಪಿ.ಪಾರ್ಕ್, ಆರ್.ಆರ್.ನಗರ ವಲಯ, ಎಚ್.ಎಸ್.ಆರ್. ಬಡಾವಣೆ ಬಿಸ್ಮಿಲ್ಲಾನಗರ, ಮಾಗಡಿ ರಸ್ತೆ, ರುದ್ರಪ್ಪ ಬಡಾವಣೆ, ದೊಮ್ಮಲೂರು, ದಾಸರಹಳ್ಳಿ ಹಲವು ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಿದೆ.


ಎಂ.ಎಸ್.ಆರ್. ಲೇಔಟ್ ನಲ್ಲಿ ಮತ್ತು ಜಯದೇವ ಆಸ್ಪತ್ರೆಯ ಮುಂಭಾಗದಲ್ಲಿ ಮರಗಳು ಧರೆಗುರುಳಿದ್ದು, ವಾಹನ ಸಂಚಾರ ಸ್ಥಗಿತಗೊಂಡಿತ್ತು. 


ಇನ್ನೂ ಎರಡು ದಿನ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಬಿಬಿಎಂಪಿ ಆಲರ್ಟ್ ಆಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ  ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.


ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಿಂದ ಎರಡೂ ಕಡೆಯ ತೇವಾಂಶ ಮಿಶ್ರಿತ ಗಾಳಿ ಒಂದೆಡೆ ಸೇರಿ ಗಾಳಿಯ ಒತ್ತಡದಿಂದ ಹೆಚ್ಚು ಮಳೆಯಾಗುತ್ತಿದೆ. ದಕ್ಷಿಣ ಒಳನಾಡಿನಲ್ಲೂ ಕೂಡಾ ಹೆಚ್ಚು ಪ್ರಮಾಣದ ಮಳೆಯಾಗಿರೋದು ದಾಖಲಾಗಿದೆ, ಸೆಪ್ಟೆಂಬರ್‌ ತಿಂಗಳ ಅಂತ್ಯದವರೆಗೂ ಇದೇ ರೀತಿ ಮಳೆಯ ಮುನ್ಸೂಚನೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಹೇಳಿಕೆ ನೀಡಿದ್ದಾರೆ.