ಬೆಂಗಳೂರು: ದಕ್ಷಿಣ ಮಹಾರಾಷ್ಟ್ರಾದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿಗೆ 2.22 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಆಲಮಟ್ಟಿ ಜಲಾಶಯದ ಹೊರಹರಿವನ್ನೂ ಹೆಚ್ಚಿಸಲಾಗಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕೃಷ್ಣಾ ನದಿ ತೀರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಕೃಷ್ಣಾ ನದಿಗೆ ನೀರು ಹರಿದು ಬರುವ ಸಾಧ್ಯತೆ ಇದ್ದು, ಜಿಲ್ಲೆಯ ಲಿಂಗಸುಗೂರು, ದೇವದುರ್ಗ, ರಾಯಚೂರು ಗ್ರಾಮೀಣ ಭಾಗದ ನದಿ ಪಾತ್ರದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಇದಲ್ಲದೆ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2.71 ಕ್ಯೂಸೆಕ್ ನೀರು ಹರಿಬಿಟ್ಟಿದ್ದು, ಕಲಬುರ್ಗಿ-ದೇವದುರ್ಗ ಸಂಪರ್ಕ ಕಡಿತವಾಗಿದೆ. ದೇವದುರ್ಗ ತಾಲೂಕಿನ ಹುವಿನಹಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಸಾರ್ವಜನಿಕರು ಸಂಪರ್ಕವಿಲ್ಲದೆ ಪರದಾಡುವಂತಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಲಬುರಗಿ ಮತ್ತು ದೇವದುರ್ಗ ಸಂಪರ್ಕ ಕಲ್ಪಿಸುವ ಹುವಿನಹಡಗಿ ಸೇತುವೆಯ ಸಂಚಾರಕ್ಕೆ ನಿಷೇಧ ಹೇರಲಾಗಿದೆ.


ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಉತ್ತರ ಕರ್ನಾಟಕ ತತ್ತರಿಸಿದ್ದು, ಈ ಭಾಗದ ಐದು ಜಿಲ್ಲೆಯ ನೂರಾರು ಗ್ರಾಮಗಳಲ್ಲಿ ಜಲ ಪ್ರಳಯ ಸೃಷ್ಟಿಯಾಗಿದೆ. ಕೊಯ್ನಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದ್ದು, ಇದರಿಂದ ಕೃಷ್ಣಾ ನದಿ ತೀರದಲ್ಲಿರುವ ಬೆಳಗಾವಿ, ಬಾಗಲಕೋಟ, ವಿಜಯಪುರ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಗ್ರಾಮಗಳು ಜಲಾವೃತವಾಗಿವೆ. ಬೆಳಗಾವಿಯ ಚಿಕ್ಕೋಡಿ, ಅಥಣಿ ರಾಯಭಾಗ ಹಾಗೂ ಕಾಗವಾಡ ತಾಲೂಕಿನಲ್ಲಿ 850ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.