ಕೊಡಗು: ವಿವಾದಿತ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತವಾಗಿದ್ದು, ಜಿಲ್ಲೆ ಬಂದ್​ಗೆ ಕರೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಆದಾಗ್ಯೂ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆಗಳಲ್ಲಿ ಪೊಲೀಸ್‌ ಬಿಗಿ ಭದ್ರತೆಯಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯುವುದು ಬಹುತೇಕ ಖಚಿತವಾಗಿದೆ. ಜಿಲ್ಲಾಡಳಿತದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಭದ್ರತೆಗಾಗಿ ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಪೊಲೀಸರು ಬೀಡುಬಿಟ್ಟಿದ್ದಾರೆ.



ಬಿಜೆಪಿ, ಹಿಂದು ಪರ ಸಂಘಟನೆಗಳಿಂದ ಬಂದ್​ಗೆ ಕರೆ ನೀಡಿದ್ದು, ಜಿಲ್ಲಾಧಿಕಾರಿ ಕಚೇರಿ ಬಳಿ ಟಿಪ್ಪು ಜಯಂತಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿವೆ. ಕೆಎಸ್​​ಆರ್​ಟಿಸಿ ಬಸ್​​ಗಳು ಮತ್ತು ಆಟೋಗಳು ಮಾತ್ರ ಎಂದಿನಂತೆ ಸಂಚರಿಸುತ್ತಿದ್ದು, ಖಾಸಗಿ ಬಸ್​​ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಯುಕೊ ಸಂಘಟನೆಯಿಂದ ಇಂದು ಕರಾಳ ದಿನಾಚರಣೆಗೂ ಕರೆ ನೀಡಲಾಗಿದೆ.



ಮೂರು ವರ್ಷಗಳ ಹಿಂದೆ ಟಿಪ್ಪು ಜಯಂತಿ ವೇಳೆ ಮಂಜಿನನಗರಿಯಲ್ಲಿ ಗಲಭೆ ಉಂಟಾದ ಹಿನ್ನೆಲೆಯಲ್ಲಿ ಈ ಬಾರಿಯೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಲವು ನಿರ್ಬಂಧಗಳನ್ನು ಹೇರಿದೆ. ಗುರುವಾರ ಸಂಜೆಯಿಂದ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ, ಮದ್ಯ ಮಾರಾಟ ಸ್ಥಗಿತಗೊಳಿಸಲಾಗಿದೆ. ಬಂದೂಕು ಬಳಕೆಯಿರುವ ಕೊಡಗಿನಲ್ಲಿ ಕೇವಲ ಬ್ಯಾಂಕ್​ ರಕ್ಷಣಾ ಸಿಬ್ಬಂದಿ ಹೊರತು ಪಡಿಸಿ, ಬಂದೂಕು ಸಾಗಾಟಕ್ಕೆ ನಿರ್ಬಂಧ ಹಾಕಲಾಗಿದೆ. ಯಾವುದೇ ಪ್ರತಿಭಟನೆ, ಬ್ಯಾನರ್ ಬಳಸುವುದು, ಕರಪತ್ರಗಳನ್ನು ಹಂಚಿಕೆ ಹಾಗೂ ಘೋಷಣೆ ಕೂಗುವುದಕ್ಕೆ ನಿಷೇಧಿಸಲಾಗಿದೆ.