ಬೆಂಗಳೂರು: ಸಿಗರೇಟು, ಬೀಡಿ ಸೇರಿ ತಂಬಾಕು ಉತ್ಪನ್ನಗಳ ಕವರ್‌, ಪಾಕೆಟ್‌ಗಳ ಮೇಲೆ ಶೇ.85ರಷ್ಟು ಎಚ್ಚರಿಕೆ ಸಂದೇಶ ಸಾರುವ ಚಿತ್ರದ ಮುದ್ರಣ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿ ತೀರ್ಪು ನೀಡಿದೆ. 


COMMERCIAL BREAK
SCROLL TO CONTINUE READING

ನ್ಯಾಯಮೂರ್ತಿಗಳಾದ ಬಿ.ಎಸ್‌ ಪಾಟೀಲ್‌ ಹಾಗೂ ಬಿ.ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ, ತಂಬಾಕು ಉತ್ಪನ್ನಗಳ ಮೇಲೆ ಶೇ.85ರಷ್ಟು ಚಿತ್ರಸಹಿತ ಎಚ್ಚರಿಕೆ ಸಂದೇಶದ ಅಧಿಸೂಚನೆ ಸಂವಿಧಾನ ಬಾಹಿರ. ವಾಸ್ತವವಾಗಿ ವಿಧಿಸಲಾಗಿರುವ ಕೆಲ ನಿಯಮಗಳ ಪಾಲನೆ ಕಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟು, ಕೇಂದ್ರ ಆರೋಗ್ಯ ಇಲಾಖೆ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ. 


ಇನ್ನು ಕೇಂದ್ರ ಸರ್ಕಾರ ಅಥವಾ ಸಕ್ಷಮ ಪ್ರಾಧಿಕಾರ ಸಂವಿಧಾನದ ಪರಿಚ್ಛೇದ 77(3)ರಡಿ ಕಾನೂನಿನ ಪ್ರಕಾರ ಹೊಸದಾಗಿ ತಿದ್ದುಪಡಿ ಪ್ರಕ್ರಿಯೆ ನಡೆಸಲು ಸ್ವತಂತ್ರವಾಗಿದೆ ಎಂದು ನ್ಯಾಯಪೀಠವು ಇದೇ ವೇಳೆ ಸ್ಪಷ್ಟಪಡಿಸಿದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ತನ್ನ ಈ ನೀತಿಯನ್ನು ಮರು ಜಾರಿಗೊಳಿಸಲು ಅವಕಾಶ ಸಿಕ್ಕಿದೆ. 


ದೇಶದ ವಿವಿಧ ಸಿಗರೇಟ್ ಉತ್ಪಾದನಾ ಕಂಪನಿಗಳು ಕೇಂದ್ರ ಸರ್ಕಾರದ ಈ ತಿದ್ದುಪಡಿ ಅಧಿನಿಯಮವನ್ನು ಪ್ರಶ್ನಿಸಿ ತಮ್ಮ ರಾಜ್ಯಗಳಲ್ಲಿನ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದವು. ದೇಶಾದ್ಯಂತ ಇಂತಹ 50ಕ್ಕೂ ಹೆಚ್ಚು ತಕರಾರು ಅರ್ಜಿಗಳು ಆಯಾ ರಾಜ್ಯದ ಹೈಕೋರ್ಟ್ ಗಳಲ್ಲಿ ದಾಖಲಾಗಿತ್ತು. ಹೀಗಾಗಿ ಸುಪ್ರೀಂಕೋರ್ಟ್ ಈ ಎಲ್ಲಾ ತಕರಾರು ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಗೆ ರವಾನಿಸಿತ್ತು.