ಬೆಂಗಳೂರು: ಬಗರ್ ಹುಕುಂ ಭೂಮಿ ಅಕ್ರಮ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ದಾಖಲಿಸಿದ್ದ ಎಫ್ಐಆರ್ ರದ್ದು ಮಾಡುವಂತೆ ಮಾಜಿ ಸಚಿವ ಆರ್.ಅಶೋಕ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್, ತನಿಖೆಗೆ ಆದೇಶಿಸಿದೆ. 


COMMERCIAL BREAK
SCROLL TO CONTINUE READING

ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್, ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಸಾಬೀತಾಗಿರುವಂತೆ ಕಾಣುತ್ತಿದೆಯಾದರೂ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವುದು ಉತ್ತಮ ಹೇಳಿ ಎಸಿಬಿ ತನಿಖೆಗೆ ಆದೇಶಿಸಿದ್ದಾರೆ.


ಬೆಂಗಳೂರು ಉತ್ತರ ತಾಲೂಕಿನ ಭೂ ಪರಿವರ್ತನೆ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಆರ್. ಅಶೋಕ್ ಅವರು, ಸೋಮನಹಳ್ಳಿಯ 8 ಎಕರೆ ಬಗರ್ ಹುಕ್ಕುಂ ಭೂ ಪ್ರದೇಶವನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಆರ್.ಅಶೋಕ್ ವಿರುದ್ಧ ಎಸಿಬಿ ಎಫ್ಐಆರ್ ದಾಖಲಿಸಿತ್ತು. ಇದನ್ನು ಪ್ರಶ್ನಿಸಿದ್ದ ಆರ್.ಅಶೋಕ್ ತಮ್ಮ ಮೇಲೆ ಮಾಡಿರುವ ಆರೋಪ ರಾಜಕೀಯ ಪ್ರೇರಿತ. ಹಾಗಾಗಿ ಎಫ್ಐಆರ್ ರದ್ದು ಮಾಡಬೇಕು ಎಂದು ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು. 


ಆದರೆ, ಇಂದು ವಿಚಾರಣೆ ನಡೆಸಿದ ಹೈಕೋರ್ಟ್​, ಆರ್.ಅಶೋಕ್ ಅವರ ಅರ್ಜಿಯನ್ನು ವಜಾಗೊಳಿಸಿ ಎಸಿಬಿ ತನಿಖೆಗೆ ಆದೇಶ ನೀಡಿದೆ.