ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿಗಳಿಗೆ ವಿಚಾರಣೆ ವೇಳೆ ಪೊಲೀಸರು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯಗಳಿಗೆ ಈ ಆರೋಪದ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದೆ.


COMMERCIAL BREAK
SCROLL TO CONTINUE READING

ಪ್ರಕರಣದ ಆರೋಪಿಗಳಾದ ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್, ಮನೋಹರ್ ಯಡವೆ, ಅಮೋಲ್ ಕಾಳೆ ಮತ್ತು ಅಮಿತ್ ರಾಮಚಂದ್ರ ದೇಗ್ವೆಕರ್ ಹೈಕೋರ್ಟ್'ಗೆ ತಕಾರು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು, ಈ ಕುರಿತು ದಾಖಲೆಗಳನ್ನು ಪರಿಶೀಲಿಸುವಂತೆ ವಿಚಾರಣಾ ನ್ಯಾಯಾಲಯಗಳಿಗೆ ಸೂಚಿಸಿದ್ದಾರೆ. 


ಆರೋಪಿಗಳ ಪರವಾಗಿ ಅರ್ಜಿ ಸಲ್ಲಿಸಿದ್ದ ವಕೀಲ ಎನ್.ಪಿ.ಅಮೃತೇಶ್, ಪೊಲೀಸರು ನೀಡಿದ್ದಾರೆ ಎನ್ನಲಾದ ಚಿತ್ರಹಿಂಸೆಯ ಕುರಿತು 1ನೇ ಮತ್ತು 3ನೇ ಎಸಿಎಂಎಂ ನ್ಯಾಯಾಲಯಕ್ಕೆ ತಿಳಿಸಿದ್ದರೂ ನ್ಯಾಯಾಲಯಗಳು ಅರ್ಜಿದಾರರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಆದೇಶ ನೀಡಿಲ್ಲ ಎಂದು ಆರೋಪಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ  ಪ್ರಾಸಿಕ್ಯೂಷನ್ ಪರ ವಕೀಲ ರಾಚಯ್ಯ, ಆರೋಪಿಗಳನ್ನು ಈಗಾಗಲೇ ಹಲವು ಬಾರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆದರೆ ಅವರು ಇದರ ಬಗ್ಗೆ ಒಮ್ಮೆಯೂ ನ್ಯಾಯಾಧೀಶರ ಗಮನಕ್ಕೆ ತಂದಿಲ್ಲ' ಎಂದರು. 


ಈಗ ಅಧೀನ ನ್ಯಾಯಾಲಯಗಳು ಈ ಬಗ್ಗೆ ವಿಚಾರಣೆ ನಡೆಸಿ ದಾಖಲೆ ಸಂಗ್ರಹಿಸಿ ವರದಿ ನೀಡುವಂತೆ  ಹೈಕೋರ್ಟ್ ಸೂಚನೆ ನೀಡಿದ್ದು, ದಾಖಲೆಗಳ ಪರಿಶೀಲನೆ ನಂತರವೇ ಮುಂದಿನ ವಿಚಾರಣೆ ನಡೆಸಲು ನಿರ್ಧರಿಸಿದೆ.