ನಲಪಾಡ್ ಫಾರಿನ್ ಕನಸಿಗೆ ಹೈಕೋರ್ಟ್ ತಡೆ
ಲಂಡನ್ಗೆ ಹೋಗಬೇಕು ಎನ್ನುವುದಾದರೆ ಸೆಷನ್ಸ್ ನ್ಯಾಯಾಲಯದಲ್ಲೇ ಅನುಮತಿ ಕೇಳುವಂತೆ ಹೈಕೋರ್ಟ್ನ ಏಕಸದಸ್ಯ ಪೀಠ ನಲಪಾಡ್`ಗೆ ಸೂಚನೆ ನೀಡಿದೆ.
ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ವಿದೇಶಕ್ಕೆ ತೆರಳಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಉದ್ಯಮಿ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಮೊಹಮದ್ ನಲಪಾಡ್ ಲಂಡನ್ನಿನಲ್ಲಿರುವ ತನ್ನ ಸಹೋದರರನ್ನು ಭೇಟಿ ಮಾಡಲು ಅವಕಾಶ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇಂದು ಆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ 15 ದಿನಗಳ ವಿದೇಶ ಪ್ರವಾಸಕ್ಕೆ ಅವಕಾಶ ನೀಡಲು ನಿರಾಕರಿಸಿದೆ. ಅಲ್ಲದೆ, ಲಂಡನ್ಗೆ ಹೋಗಬೇಕು ಎನ್ನುವುದಾದರೆ ಸೆಷನ್ಸ್ ನ್ಯಾಯಾಲಯದಲ್ಲೇ ಅನುಮತಿ ಕೇಳುವಂತೆ ಹೈಕೋರ್ಟ್ನ ಏಕಸದಸ್ಯ ಪೀಠ ಸೂಚನೆ ನೀಡಿದೆ.
ಹಲ್ಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಷರತ್ತುಬದ್ಧ ಜಾಮೀನು ಪಡೆದಿರುವ ನಲಪಾಡ್, ಸೆಷನ್ ಕೋರ್ಟ್ ವಿಧಿಸಿದ್ದ ಷರತ್ತುಗಳನ್ನ ಸಡಿಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ವಿಚಾರಣೆ ನಡೆಸಿದ ಹೈಕೋರ್ಟ್, ಈ ಮನವಿಯನ್ನೂ ಸಹ ಸೆಷನ್ಸ್ ನ್ಯಾಯಾಲಯದಲ್ಲೇ ಇತ್ಯರ್ಥಪಡಿಸಿಕೊಳ್ಳುವಂತೆ ಹೇಳಿದೆ.
ಫೆ.17 ರಂದು ಯುಬಿ ಸಿಟಿಯಲ್ಲಿರುವ ಫೆಗ್ರಿ ಕಫೆ ರೆಸ್ಟೋರೆಂಟ್ ನಲ್ಲಿ ಊಟ ಮಾಡುತ್ತಿದ್ದ ವೇಳೆ ಕಾಲು ತಗುಲಿತು ಎಂಬ ಕಾರಣಕ್ಕೆ ಮೊಹಮ್ಮದ್ ಹ್ಯಾರಿಸ್ ನಳಪಾಡ್ ಮತ್ತು ಆತನ ಸ್ನೇಹಿತರು ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು. ನಂತರ ತಲೆಮರೆಸಿಕೊಂಡಿದ್ದ ನಲಪಾಡ್ ಫೆ.19ರಂದು ಪೊಲೀಸರಿಗೆ ಶರಣಾಗಿದ್ದರು.