ಬೆಂಗಳೂರು: ಇನ್ಮುಂದೆ ಕಾಲೇಜು ವಿದ್ಯಾರ್ಥಿಗಳು ಕ್ಲಾಸ್ ಬಂಕ್ ಮಾಡಿ ಅಲ್ಲಿ ಅಲ್ಲಿ ತಿರುಗುವ ಹಾಗಿಲ್ಲ. ಹಾಗೆಯೇ ತರಗತಿ ವಿದ್ಯಾರ್ಥಿಗಳು ಇಲ್ಲ ಎಂಬ ಕಾರಣ ಹೇಳಿ ಶಿಕ್ಷಕರೂ ಕೂಡ ಪಾಠ ಮಾಡದೆ ಕೂರುವ ಹಾಗಿಲ್ಲ. ಅಂತಹ ಒಂದು ಕಟ್ಟುನಿಟ್ಟಾದ ನಿಯಮ ಜಾರಿಗೆ ರಾಜ್ಯ ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. 


COMMERCIAL BREAK
SCROLL TO CONTINUE READING

ಪದವಿ ಕಾಲೇಜುಗಳಲ್ಲಿ ನಕಲಿ ಹಾಜರಾತಿ ತಪ್ಪಿಸುವ ಉದ್ದೇಶದಿಂದ ಹಾಗೂ ವಿದ್ಯಾರ್ಥಿಗಳು ತರಗತಿಗೆ ಕಡ್ಡಾಯವಾಗಿ ಹಾಜರಾಗುವಂತೆ ಮಾಡಲು ಉನ್ನತ ಶಿಕ್ಷಣ ಇಲಾಖೆ ಪ್ರಸಕ್ತ ಶಿಕ್ಷಣಿಕ ವರ್ಷ ಮುಗಿಯುವುದರೊಳಗೆ ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಲು ತರಲು ನಿರ್ಧರಿಸಿದೆ. ಹಾಗೆಯೇ ಶಿಕ್ಷಕರಿಗೂ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಲಿದೆ.


''ರಾಜ್ಯದ ಎಲ್ಲ ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗೂ ಅನ್ವಯವಾಗುವಂತೆ ಬಯೊ ಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ವಿವಿ ಅಥವಾ ಕಾಲೇಜು ಕ್ಯಾಂಪಸ್‌ನ ಪ್ರತಿಯೊಬ್ಬರೂ ದಿನನಿತ್ಯ ಪಂಚ್‌ ಮಾಡಿಯೇ ಕಾಲೇಜಿನೊಳಗೆ ಬರಬೇಕು ಹಾಗೂ ಹೊರಗೆ ಹೋಗಬೇಕೆಂಬುದು ಸರಕಾರದ ಉದ್ದೇಶವಾಗಿದೆ'' ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ. 


ಬಯೊಮೆಟ್ರಿಕ್‌ ಹಾಜರಾತಿ ಪದ್ಧತಿಯನ್ನು ಪರೀಕ್ಷಾ ವ್ಯವಸ್ಥೆಗೂ ಲಿಂಕ್‌ ಮಾಡಲಾಗುತ್ತದೆ. ಪ್ರತಿ ದಿನ ವಿದ್ಯಾರ್ಥಿ ತರಗತಿಗೆ ಹಾಜರಾಗುವ ಮುನ್ನ ಅಥವಾ ನಿರ್ಗಮಿಸುವ ಮುನ್ನ ಪಂಚ್‌ ಮಾಡುವ ಸಂದರ್ಭದಲ್ಲಿ ಅದರ ಡೇಟಾ ಸರ್ವರ್‌ನಲ್ಲಿ ದಾಖಲಾಗಲಿದೆ. ವಿವಿಯ ಹಿರಿಯ ಅಧಿಕಾರಿಗಳು ಅಥವಾ ತಾಂತ್ರಿಕ ತಂಡಕ್ಕೆ ದತ್ತಾಂಶ ಲಭ್ಯವಾಗುವ ರೀತಿಯಲ್ಲಿ ಬಯೊಮೆಟ್ರಿಕ್‌ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ತಾಂತ್ರಿಕ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳಿಗೆ ಈ ನಿಯಮ ಅನ್ವಯವಾಗಲಿದೆ.