DK Shivakumar : `ಹಿಜಾಬ್ ವಿವಾದ ಇಡೀ ದೇಶಕ್ಕೆ ದೊಡ್ಡ ಅಪಮಾನ`
‘ಕೇಸರಿ ಶಾಲು ಯಾಕೆ ಬಂತು ಎಂದು ನಮಗೆ ಗೊತ್ತಿದೆ. ಮೊದಲು ನಾವು ದೇಶ ಉಳಿಸಬೇಕಿದೆ. ಆ ಬಗ್ಗೆ ಚಿಂತಿಸುತ್ತಿದ್ದೇವೆ. ದೇಶದಲ್ಲಿ ಹಣದುಬ್ಬರ, ತೆರಿಗೆ ಹೊರೆ, ಬೆಲೆ ಏರಿಕೆ ಮೂಲಕ ದಿನನಿತ್ಯ ಜನರ ಜೇಬು ಪಿಕ್ ಪಾಕೇಟ್ ಆಗುತ್ತಿದೆ.
ಉಡುಪಿ : ಸಂವಿಧಾನವೇ ನಮ್ಮ ಧರ್ಮ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ನಾವೆಲ್ಲರೂ ಒಪ್ಪಿದ್ದೇವೆ. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯದ ತೀರ್ಪು ಏನೇ ಬಂದರೂ ನಾವದನ್ನು ಸ್ವಾಗತಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಕೇಸರಿ ಹಾಗೂ ಹಿಜಾಬ್ ವಿಚಾರವಾಗಿ ಪಕ್ಷದ ನಿಲುವು ಏನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು(DK Shivakumar), ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ಶಿಕ್ಷಣ ಎಲ್ಲರ ಹಕ್ಕು, ಸರಸ್ವತಿ ಎಲ್ಲರಿಗೂ ಸಿಗುವಂತಾಗಬೇಕು ಎಂದಿದ್ದಾರೆ. ಅವರ ನಿಲುವೇ ನಮ್ಮ ನಿಲುವು. ನಾನು ಈ ಹಿಂದೆ ಸಾಕಷ್ಟು ಬಾರಿ ಹೇಳಿದ್ದೇನೆ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ನಾವು ಜಾತಿ, ಧರ್ಮದ ವಿಚಾರದಲ್ಲಿ ಜನರನ್ನು ಬೇರೆ ಮಾಡಬಾರದು' ಎಂದರು.
ಇದನ್ನೂ ಓದಿ : "ಹಿಜಾಬ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ": ವಿಪಕ್ಷ ನಾಯಕ ಸಿದ್ದರಾಮಯ್ಯ
‘ಕೇಸರಿ ಶಾಲು ಯಾಕೆ ಬಂತು ಎಂದು ನಮಗೆ ಗೊತ್ತಿದೆ. ಮೊದಲು ನಾವು ದೇಶ ಉಳಿಸಬೇಕಿದೆ. ಆ ಬಗ್ಗೆ ಚಿಂತಿಸುತ್ತಿದ್ದೇವೆ. ದೇಶದಲ್ಲಿ ಹಣದುಬ್ಬರ, ತೆರಿಗೆ ಹೊರೆ, ಬೆಲೆ ಏರಿಕೆ ಮೂಲಕ ದಿನನಿತ್ಯ ಜನರ ಜೇಬು ಪಿಕ್ ಪಾಕೇಟ್ ಆಗುತ್ತಿದೆ. ಬೀದಿಬದಿ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಯಾರಿಗೂ ಸರ್ಕಾರ ಸಹಾಯ ಮಾಡಿಲ್ಲ. ಆರ್ಥಿಕವಾಗಿ, ಮಾನಸಿಕವಾಗಿ ಕುಗ್ಗಿದ್ದಾರೆ. ಈ ವರ್ಗದವರಿಗೆ ಬ್ಯಾಂಕ್ ನಿಂದ ಯಾವುದೇ ರೀತಿಯ ಸಹಕಾರವೂ ದೊರೆತಿಲ್ಲ. ಸರ್ಕಾರ ಕೋವಿಡ್ ಸಂತ್ರಸ್ತರಿಗೆ ಪರಿಹಾರ ನೀಡುತ್ತಿಲ್ಲ. ಈ ವರ್ಗದವರಿಗೆ ಶಕ್ತಿ ತುಂಬಬೇಕು. ಜನಸಾಮಾನ್ಯರು ನೆಮ್ಮದಿಯಾಗಿ ಬದುಕಲು ಉದ್ಯೋಗ ಬೇಕು. ಆ ಬಗ್ಗೆ ನಾವೆಲ್ಲರೂ ಚಿಂತನೆ ಮಾಡಬೇಕು.’
‘ಹಿಜಾಬ್ ವಿವಾದ(Hijab Controversy) ಇಡೀ ದೇಶಕ್ಕೆ ದೊಡ್ಡ ಅಪಮಾನ. ಈ ಕರಾವಳಿ ಭಾಗಕ್ಕೆ ಅದರದೇ ಆದ ಇತಿಹಾಸವಿದೆ. ಇಲ್ಲಿರುವ ದೇವಾಲಯ, ಧರ್ಮಕ್ಷೇತ್ರಗಳನ್ನು ಹುಡುಕಿಕೊಂಡು ಎಲ್ಲ ಮೂಲೆಗಳಿಂದ ಜನ ಬರುತ್ತಾರೆ. ಇಲ್ಲಿ ನೂರಾರು ಕಿ.ಮೀ. ಸಮುದ್ರವಿದೆ. ಆ ಮೂಲಕ ಉದ್ಯೋಗ ಸೃಷ್ಟಿಸಲು ನೆರವಾಗಲಿದೆ. ಕೇವಲ 40-50 ಕಿ.ಮೀ ಸಮುದ್ರ ಇರುವ ಗೋವಾ ಯಾವ ರೀತಿ ಅಭಿವೃದ್ಧಿ ಹೊಂದಿದೆ, ಈ ಭಾಗದಲ್ಲಿ ಏನಾಗಿದೆ ಎಂದು ನಾವು ಹೇಳಬೇಕಾದ ಅಗತ್ಯವಿಲ್ಲ. ಈ ಭಾಗದ ಹಿರಿಯರು ದೇಶಕ್ಕೆ ದೊಡ್ಡ ಬ್ಯಾಂಕುಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಅತಿ ಹೆಚ್ಚು ವೈದ್ಯರು, ಇಂಜಿನಿಯರ್ ಗಳು ಸೇರಿದಂತೆ ಅತಿ ದೊಡ್ಡ ಪ್ರಮಾಣದಲ್ಲಿ ಮಾನವ ಶಕ್ತಿಯನ್ನು ಈ ಭಾಗ ದೇಶಕ್ಕೆ ಕೊಟ್ಟಿದೆ.’
‘ಇದೊಂದು ಜ್ಞಾನಭೂಮಿ. ವಿಶ್ವದ ಅನೇಕ ಕಡೆಗಳಿಂದ ಇಲ್ಲಿಗೆ ಓದಲು ಬರುತ್ತಾರೆ. ಪಿಯುಸಿ ಓದಲು ನಮ್ಮ ರಾಜ್ಯದ ಹಲವು ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಈ ಭಾಗಕ್ಕೆ ಬರುತ್ತಾರೆ. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರು ವಿಮಾನ ನಿಲ್ದಾಣ ಉದ್ಘಾಟನೆ ಸಮಯದಲ್ಲಿ, ಇಷ್ಟು ದಿನ ವಿಶ್ವ ನಾಯಕರು ದೆಹಲಿಗೆ ಬಂದು ಭಾರತದ ಬೇರೆ ಪ್ರದೇಶಕ್ಕೆ ಹೋಗುತ್ತಿದ್ದರು. ಆದರೆ ಈಗ ಮೊದಲು ಬೆಂಗಳೂರಿಗೆ ಬಂದು ನಂತರ ದೆಹಲಿಗೆ ಆಗಮಿಸುತ್ತಿದ್ದಾರೆ ಎಂದಿದ್ದರು. ಇಲ್ಲಿ ವಿದ್ಯಾವಂತರು, ಮಾನವ ಶಕ್ತಿ, ಸಂಸ್ಕೃತಿ ಇದೆ ಎಂದು ಹೇಳಿದ್ದರು. ಇಲ್ಲಿ ಉದ್ಯೋಗ ಸೃಷ್ಟಿಸಲು ಪ್ರಯತ್ನಿಸದೇ, ಅವರ ಜೀವನಕ್ಕೆ ದಾರಿ ಕಲ್ಪಿಸಿಕೊಡದೇ, ಸಂಪತ್ತು ಸದ್ಬಳಕೆ ಮಾಡಿಕೊಳ್ಳದೇ, ಧಾರ್ಮಿಕ ವಿಚಾರವಾಗಿ ಮಕ್ಕಳ ಭಾವನೆ ಕೆರಳಿಸಿ ರಾಜ್ಯವನ್ನು ಹಾಳು ಮಾಡಲಾಗುತ್ತಿದೆ. ಇಡೀ ದೇಶ ಹಾಗೂ ವಿಶ್ವದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ.’
ಇದನ್ನೂ ಓದಿ : ಬಿಜೆಪಿ ಸರ್ಕಾರದಿಂದಲೇ ಹಿಜಾಬ್ ವಿವಾದ ಪ್ರಾರಂಭವಾಗಿದೆ: ಎಂ.ಬಿ.ಪಾಟೀಲ್
‘ಶಾಲೆ, ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ಹೋದಾಗ ನಾವು ಯಾರನ್ನೂ ವಿಭಿನ್ನವಾಗಿ ಕಾಣಲು ಸಾಧ್ಯವಿಲ್ಲ. ಒಬ್ಬರು ಕುಂಕುಮ(Kunkum) ಇಟ್ಟುಕೊಂಡರೆ, ಮತ್ತೊಬ್ಬರು ಓಲೆ, ಬಳೆ ತೊಡುತ್ತಾರೆ. ಕೆಲವರು ಉಂಗುರ ತೊಟ್ಟರೆ ಮತ್ತೊಬ್ಬರು ಬೇರೆ ಹಾಕಿಕೊಳ್ಳುತ್ತಾರೆ. ಅವರ ಪದ್ಧತಿ ಅವರು ಪಾಲಿಸುತ್ತಾರೆ. ಯಾರಿಗೂ ತಮ್ಮ ಧರ್ಮ ಬಿಟ್ಟು ಬದುಕಿ ಎಂದು ಹೇಳಲು ಸಾಧ್ಯವಿಲ್ಲ. ಕಾನೂನಿದೆ, ಪದ್ಧತಿ ಇದೆ. ಅದನ್ನು ಪಾಲಿಸಿಕೊಂಡು ಹೋದರೆ ತಪ್ಪೇನು? ಇಲ್ಲದ್ದನ್ನು ಹುಟ್ಟು ಹಾಕಿ ಚುನಾವಣೆಯಲ್ಲಿನ ಸೋಲನ್ನು, ತಮ್ಮ ವೈಫಲ್ಯವನ್ನು ಮರೆಮಾಚಲು, ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ. ನಾವದನ್ನು ಖಂಡಿಸುತ್ತೇವೆ. ಮುಂದೆ ನ್ಯಾಯಾಲಯದಲ್ಲಿ ಎಲ್ಲರಿಗೂ ನ್ಯಾಯ ಸಿಗಲಿದೆ. ನಮ್ಮ ಮೊದಲ ಗುರಿ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡುವುದು, ಅವರು ನೆಮ್ಮದಿ ಜೀವನ ಮಾಡುವಂತೆ ನೋಡಿಕೊಳ್ಳುವುದು. ಕಾರಣ, ಈ ಭಾಗದ ಜನ ಬೇರೆ ರಾಜ್ಯ ಹಾಗೂ ದೇಶಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಈ ಯುವಕರಿಗೆ ಇಲ್ಲೇ ಉದ್ಯೋಗ ಕಲ್ಪಿಸಿ ಇದನ್ನು ಸಂಪದ್ಭರಿತ ಭೂಮಿಯನ್ನಾಗಿ ಮಾಡಬೇಕು ಎಂಬುದು ನಮ್ಮ ಪಕ್ಷದ ಆಸೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಜನರ ಭಾವನೆ ಕೆರಳಿಸಬಾರದು ಎಂಬುದು ನಮ್ಮ ಆಗ್ರಹ’ ಎಂದರು.
ಬಿಜೆಪಿ ನಾಯಕರ(BJP Leaders) ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ‘ಬಿಜೆಪಿ ನಾಯಕರು ಏನೇ ಮಾತನಾಡುವುದಿದ್ದರೂ ತಮ್ಮ ಸಚಿವ ಸಂಪುಟದಲ್ಲಿ ಮಾತನಾಡಲಿ. ಅಧಿಕಾರ ಸ್ವೀಕರಿಸುವಾಗ ಮಾಡಿದ ಪ್ರಮಾಣ ವಚನಕ್ಕೆ ಅವರು ಬದ್ಧರಾಗಿರಲಿ. ಚುನಾವಣೆಗೆ ಸ್ಪರ್ಧಿಸುವಾಗ, ಅಧಿಕಾರ ಸ್ವೀಕರಿಸುವಾಗ ಮಾಡಿದ ಆಣೆಯಂತೆ ನಡೆದುಕೊಳ್ಳಲಿ. ಅವರು ತಮ್ಮ ಪ್ರಮಾಣದ ಸ್ವರೂಪ ಬದಲಾಯಿಸಿ ಈ ರೀತಿ ಮಾತನಾಡಲಿ, ನಂತರ ನಾನು ಉತ್ತರ ನೀಡುತ್ತೇನೆ’ ಎಂದರು.
ಹಿಜಾಬ್ ವಿಚಾರದಲ್ಲಿ ಎಸ್ ಡಿಪಿಐ ಕೈವಾಡದ ಬಗ್ಗೆ ಕೇಳಿದ ಪ್ರಶ್ನೆಗೆ, ‘ನನಗೆ ಯಾರೂ ವರದಿ ನೀಡಬೇಕಾದ ಅಗತ್ಯವಿಲ್ಲ. ಯಾರೂ ವರದಿ ಕೊಟ್ಟಿಲ್ಲ. ಇದು ಜನರ ಭಾವನೆ ಕೆರಳಿಸಿ ಯುವಕರು, ವಿದ್ಯಾರ್ಥಿಗಳ ಮನಸ್ಸಲ್ಲಿ ವಿಷಬೀಜ ಬಿತ್ತುವ ಪ್ರಯತ್ನ. ಇದರ ಬಗ್ಗೆ ಮಾತನಾಡುವುದಿಲ್ಲ. ಎಲ್ಲ ಪೋಷಕರು ಈ ವಿಚಾರದಲ್ಲಿ ಆತಂಕಗೊಂಡಿದ್ದಾರೆ’ ಎಂದರು.
ಇದನ್ನೂ ಓದಿ : ಕಾಂಗ್ರೆಸ್ ಹೈಕಮಾಂಡ್‌ಗೆ ಮೂರ್ಛೆ ರೋಗ ತರಿಸಲು ಸಿಧು, ಸಿದ್ದು ಸಾಕು: ಬಿಜೆಪಿ
ಈ ವಿಚಾರದಲ್ಲಿ ಕಾಂಗ್ರೆಸ್(Congress) ನ ಮುಸಲ್ಮಾನ ನಾಯಕರು ಮೌನವಾಗಿರುವುದೇಕೆ ಎಂಬ ಪ್ರಶ್ನೆಗೆ, ‘ಈ ವಿಚಾರದಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಮಾತನಾಡಿದ್ದಾರೆ. ಪಕ್ಷದ ಅಧ್ಯಕ್ಷನಾಗಿ ನಾನು ಮಾತನಾಡುತ್ತಿದ್ದೇನೆ. ಈ ವಿಚಾರದಲ್ಲಿ ಇಡೀ ಕಾಂಗ್ರೆಸ್ ಪಕ್ಷದ್ದು ಒಂದೇ ನಿಲುವು. ನಮ್ಮ ಧರ್ಮ ರಾಷ್ಟ್ರಧ್ವಜ, ನಮ್ಮ ಧರ್ಮ ಸಂವಿಧಾನ. ಇದು ಕೇವಲ ಮುಸಲ್ಮಾನರು ಅಥವಾ ಒಂದು ಸಮುದಾಯದ ವಿಚಾರವಲ್ಲ. ನಾವು ಯಾರನ್ನೂ ಬೆಂಬಲಿಸುತ್ತೇವೆ ಎಂಬುದಕ್ಕಿಂತ, ಸಂವಿಧಾನ ಉಳಿಸಿಕೊಂಡು ಹೋಗುವ ಬಗ್ಗೆ ಆಲೋಚಿಸಬೇಕು’ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.