ಹಿಂದೂಗಳ ಹತ್ಯೆ ಪ್ರಕರಣ ಸಿಬಿಐಗೆ ವಹಿಸುವಂತೆ ಒತ್ತಾಯ
ಹಿಂದೂಗಳ ಜೀವಕ್ಕೆ ಬೆಲೆ ಇಲ್ಲ- ಶೋಭಾ ಕರಂದ್ಲಾಜೆ
ಬೆಂಗಳೂರು: ಹೊನ್ನಾವರದಲ್ಲಿ ಹತ್ಯೆಯಾದ ಪರೇಶ್ ಮೆಸ್ತಾ ಹಾಗೂ ರಾಜ್ಯದ 19 ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡಿಸಿ ಹಾಗೂ ಹತ್ಯೆಗಳ ತನಿಖೆಯನ್ನು ಎನ್ಐಎ ಅಥವಾ ಸಿಬಿಯಿಗೆ ವಹಿಸುವಂತೆ ಒತ್ತಾಯಿಸಿ ಬಿಜಿಪಿ ನಾಯಕರು ಬೆಂಗಳೂರಿನ ವಿಧಾನಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆಯಿಂದ ರಾಜಭವನದ ವರೆಗೆ ಮನಗಳವಾರ ಪ್ರತಿಭಟನೆ ನಡೆಸಿದರು.
ವಿಧಾನಸೌಧದಿಂದ ರಾಜಭವನದ ವರೆಗೆ ಮೆರವಣಿಗೆಯಲ್ಲಿ ಸಾಗಿದ ಬಿಜೆಪಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ನಂತರ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ.
ಸರ್ಕಾರದಲ್ಲಿ ಹಿಂದೂಗಳ ಜೀವಕ್ಕೆ ಬೆಲೆ ಇಲ್ಲ. ಪರೇಶ್ ಮೆಸ್ತಾ ಕೊಲೆಯನ್ನು ಮುಚ್ಚಿ ಹಾಕಲು ಸರ್ಕಾರ ಷಡ್ಯಂತ್ರ ನಡೆಸುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.
ಪ್ರತಿಭಟನೆ ಸಂದರ್ಭದಲ್ಲಿ ಬಿಜೆಪಿಯ ನಾಯಕರಾದ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಈಶ್ವರಪ್ಪ, ಆರ್. ಅಶೋಕ್, ಸುರೇಶ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೇಸ್ ಪಕ್ಷದ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್, ಬಿಜೆಪಿ ಜನರ ದಾರಿ ತಪ್ಪಿಸುವ ಕೆಲಸ ಮಾಡ್ತಿದೆ. ಹಿಂಸೆಗೆ ಪ್ರಚೋದನೆ ನೀಡುವುದೇ ಬಿಜೆಪಿಯ ಅಜೆಂಡ. ಬಿಜೆಪಿಯವರು ಅತ್ಯಂತ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಯಾರೇ ತಪ್ಪು ಮಾಡಿದರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಆದರೆ, ಬಿಜೆಪಿ ನಾಯಕರು ಕರ್ನಾಟಕದ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ. ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಅಜೆಂಡವೇ ಶಾಂತಿ ಕದಡುವುದು ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.