ಕುಡಿಯುವ ನೀರಿನ ದರ ಹೆಚ್ಚಳ ಮಾಡದಂತೆ ಹೆಚ್.ಕೆ.ಪಾಟೀಲ್ ಆಗ್ರಹ
10 ಪೈಸೆಗೆ ಒಂದು ಲೀಟರ್ ನೀರು ಪೂರೈಕೆ ಮಾಡುವುದನ್ನು ಬದಲಿಸಿ 25 ಪೈಸೆಗೊಂದು ಲೀಟರ್ ಹಾಗೂ ಕಾಲಕಾಲಕ್ಕೆ ಪರಿಷ್ಕರಣೆ ಮಾಡುವ ಸರ್ಕಾರದ ನಿಲುವು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ತದ್ವಿರುದ್ದವಾಗಿದೆ ಎಂದು ಶಾಸಕ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಬೆಂಗಳೂರು: ಈ ಹಿಂದೆ ಜಿಂದಾಲ್ ಕಂಪೆನಿಗೆ ಭೂಮಿ ನೀಡುವ ವಿಚಾರವಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಶಾಸಕ ಹೆಚ್. ಕೆ. ಪಾಟೀಲ್ ಅವರು ಈಗ ಕುಡಿಯುವ ನೀರಿನ ಬೆಲೆ ಏರಿಕೆಗೆ ನಿರ್ಧರಿಸಿರುವ ಸರ್ಕಾರದ ನಿಲುವಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಹೆಚ್.ಕೆ.ಪಾಟೀಲ್ ಅವರು, ಶುದ್ಧ ಕುಡಿಯುವ ನೀರಿನ ಘಟಕಗಳ ಸಮರ್ಪಕ ನಿರ್ವಹಣೆಯ ಹೊಸ ವ್ಯವಸ್ಥೆ ರೂಪಿಸುವ ಆಲೋಚನೆಯನ್ನು ಸ್ವಾಗತಿಸುತ್ತೇನೆ. ಆದರೆ ಸುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಹೆಚ್ಚು ವೆಚ್ಚವಾಗಲಿದೆ ಎಂಬ ಕಾರಣಕ್ಕೆ ,10 ಪೈಸೆಗೆ ಒಂದು ಲೀಟರ್ ನೀರು ಪೂರೈಕೆ ಮಾಡುವುದನ್ನು ಬದಲಿಸಿ 25 ಪೈಸೆಗೊಂದು ಲೀಟರ್ ಹಾಗೂ ಕಾಲಕಾಲಕ್ಕೆ ಪರಿಷ್ಕರಣೆ ಮಾಡುವ ಸರ್ಕಾರದ ನಿಲುವು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ತದ್ವಿರುದ್ದವಾಗಿದೆ. ಹಾಗಾಗಿ ಸರ್ಕಾರ ಕುಡಿಯುವ ನೀರಿನ ದರ ಹೆಚ್ಚಳ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಬಡವರ ಹಸಿವು ನೀಗಿಸಲು ಉಚಿತವಾಗಿ ಅಕ್ಕಿ ವಿತರಿಸಿ, ರಿಯಾಯಿತಿ ದರದಲ್ಲಿ ಆಹಾರ ನೀಡುತ್ತಾ ಅವರ ಆರೋಗ್ಯ ರಕ್ಷಿಸಲು ದಾಹ ಇಂಗಿಸಲು ಶುದ್ಧ ನೀರಿನ ದರ ಹೆಚ್ಚಳದ ಚಿಂತನೆಯೇ ನಮ್ಮ ಪಕ್ಷದ ನಿಲುವಿಗೆ ವ್ಯತಿರಿಕ್ತವಾದದ್ದು. ಹಾಗಾಗಿ ಸರ್ಕಾರ್ ಈ ನಿಲುವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಪತ್ರ ಬರೆದಿದ್ದಾರೆ.