ಮಂಗಳೂರು: ಮಂಗಳೂರಿನಲ್ಲಿ ರಾಜಕೀಯ ಪಕ್ಷಗಳು ಹೆಚ್ಚು ಕಾರ್ಯಪ್ರವೃತ್ತವಾಗಿರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಮಂಗಳೂರಿನ ಕಾಟಿಪಳ್ಳದಲ್ಲಿ ಬುಧವಾರ ನಡೆದ ಬಿಜೆಪಿ ಕಾಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಸಾರ್ವಜನಿಕರು ಶಾಂತಿಯಿಂದ ಇದ್ದಾರೆ. ಈ ಹತ್ಯೆ ಬೇರೆ ಕಾರಣಗಳಿಗೆ ನಡೆದಿರುವುದಾಗಿ ತಿಳಿದಿದೆ. ಸಂಜೆಯ ವೇಳೆಗೆ ಹತ್ಯೆಗೆ ಕಾರಣ ತಿಳಿಯಲಿದೆ ಎಂದು ಹೇಳಿದರು. 


ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅದರಲ್ಲಿ ಇಬ್ಬರು ತಪ್ಪಿಸಿಕೊಂಡು ಹೋಗಲು ಹೊರಟಿದ್ದು ಗುಂಡು ಹೊಡೆದು ಆರೋಪಿಗಳನ್ನು ಬಂಧಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಹೊನ್ನಾವರದಲ್ಲಿ ನಡೆದ ಪರೇಸ್​ ಮೆಸ್ತಾ ಕೊಲೆ ಪ್ರಕರಣದಲ್ಲಿ ಆತ ಬಿಜೆಪಿ ಕಾರ್ಯಕರ್ತ ಎನ್ನಲಾಗಿತ್ತು. ಆದರೆ ಆತ ಯಾವುದೇ ಪಕ್ಷಕ್ಕೆ ಸೇರಿರಲಿಲ್ಲ ಎಂದು ಆತನ ತಂದೆ ಹೇಳಿದ್ದರು. ಯಾರೇ ಸತ್ತರೂ ಬಿಜೆಪಿಯವರು ತಮ್ಮ ಕಾರ್ಯಕರ್ತ ಅಂತಾರೆ, ಸಾವಿನ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ರಾಮಲಿಂಗಾ ರೆಡ್ಡಿ ಬಿಜೆಪಿಗೆ ತಿರುಗೇಟು ನೀಡಿದರು.


ಇನ್ನು ಸಿಎಂ ರಾಜೀನಾಮೆ ನೀಡಬೇಕೆಂಬ ಸಿಟಿ ರವಿ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ಆಡಳಿತವಿರುವ ಕಡೆ ಕೊಲೆಗಳಾಗಿಲ್ವಾ? ಆ ರಾಜ್ಯಗಳ ಸಿಎಂಗಳ ರಾಜೀನಾಮೆಯನ್ನು ಏಕೆ ಕೇಳಲಿಲ್ಲ ಎಂದು ಪ್ರಶ್ನಿಸಿದರು.