ನರಹಂತಕರು, ಭಯೋತ್ಪಾದಕರೆಲ್ಲಾ ಬಿಜೆಪಿಯವರೇ : ಸಿದ್ದರಾಮಯ್ಯ ತಿರುಗೇಟು
ನರಹಂತಕರು, ಭಯೋತ್ಪಾದಕರು ಎರಡೂ ಬಿಜೆಪಿಯವರಿಗೇ ಅನ್ವಯಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ನವದೆಹಲಿ : ನರಹಂತಕರು, ಭಯೋತ್ಪಾದಕರು ಎರಡೂ ಬಿಜೆಪಿಯವರಿಗೇ ಅನ್ವಯಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 'ನಾನು ನರಹಂತಕ, ಭಯೋತ್ಪಾದಕ ಅಲ್ಲ, ಆ ಮಾತು ಬಿಜೆಪಿಗರಿಗೆ ಅನ್ವಯಿಸುತ್ತದೆ' ಎಂದು ಹೇಳಿದರು.
ಮಂಗಳೂರಿನಲ್ಲಿ ಜನಸುರಕ್ಷಾ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ 'ನೀವು ನರಹಂತಕ ಹುಲಿ, ಸಿಂಹಗಳ ಬಗ್ಗೆ ಕೇಳಿದ್ದೀರಿ. ಆದರೆ ದೇಶದಲ್ಲಿ ನರಹಂತಕ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಖೇಣಿ ಸೇರ್ಪಡೆಯನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ
ದೆಹಲಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ನೈಸ್ ಸಂಸ್ಥೆ ಮಾಲೀಕ ಅಶೋಕ್ ಖೇಣಿ ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯೆ ನೀಡಿ 'ಖೇಣಿ ಅವರು ಜೈಲಿಗೇ ಹೋಗಿದ್ದಾರಾ ? 'ನೈಸ್ ವಿಚಾರವೇ ಬೇರೆ ಅಶೋಕ್ ಖೇಣಿಯೇ ಬೇರೆ. ಹಾಗಂತ ನೈಸ್ ಅಕ್ರಮಗಳ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದನ್ನು ನಿಲ್ಲಿಸಲಾಗುವುದಿಲ್ಲ. ಆದರೆ, ಜೈಲಿಗೆ ಹೋಗಿ ಬಂದಿರುವವರೇ ಬಿಜೆಪಿಯವರ ಮುಂದಿನ ಸಿಎಂ ಅಭ್ಯರ್ಥಿ. ಹೀಗಾಗಿ ಖೇಣಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದನ್ನು ಪ್ರಶ್ನಿಸುವ ನೈತಿಕತೆ ಬಿಜೆಪಿಯವರಿಗೆ ಇಲ್ಲ' ಎಂದು ತಿರುಗೇಟು ನೀಡಿದ್ದಾರೆ.