ಬೆಂಗಳೂರು: ತೋಟಗಾರಿಕೆ ಇಲಾಖೆಯು ಜೇನು ಕೃಷಿ ಸಾಕಾಣಿಕೆಗೆ ಸಹಾಯಧನ ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಿದೆ.


COMMERCIAL BREAK
SCROLL TO CONTINUE READING

ರೈತರಿಗೆ ಹೆಚ್ಚು ಲಾಭ ಗಳಿಸಲು ಸಹಕಾರಿಯಾಗುವಂತೆ ಮಧುವನ ಮತ್ತು ಜೇನು ಸಾಕಾಣಿಗೆ ಅಭಿವೃದ್ಧಿ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ಜೇನು ಸಾಕಾಣಿಕೆಗೆ ಶೇ. 75ರಂತೆ ರೂ. 3375 ಗಳ ಸಹಾಯಧನ ಲಭಿಸಲಿದೆ.


ಜೇನು ಕೃಷಿ ಎಲ್ಲಾ ಪ್ರದೇಶಗಳ ರೈತರು ಉಪಕಸುಬಾಗಿ ಅಥವಾ ಮುಖ್ಯ ಕಸುಬಗಿ ಕಡಿಮೆ ಬಂಡವಾಳದಿಂದ ನಿರ್ವಹಿಸಬಹುದಾದ ಲಾಭದಾಯಕ ಬೆಳೆ. ಉದ್ದಿಮೆಯು ಕೃಷಿ, ತೋಟಗಾರಿಕೆ, ಕೃಷಿ ಅರಣ್ಯ, ಕೃಷಿ ಪಶುಪಾಲನೆ ಮುಂತಾದ ಯಾವುದೇ ಸಮ್ಮಿಶ್ರ ಕೃಷಿ ಪದ್ಧತಿಗಳ ಸಂಪನ್ಮೂಲಗಳಿಗೆ ಸ್ಪರ್ಧೆಯೊಡ್ಡದೆ, ನಿಸರ್ಗದಲ್ಲಿ ವ್ಯರ್ಥವಾಗುವ ಉಪಸಂಪನ್ಮೂಲಗಳಾದ ಪರಾಗ ಮತ್ತು ಮಕರಂದವನ್ನು ಬಳಸಿಕೊಂಡು ಕೃಷಿಕರಿಗೆ ಲಾಭವನ್ನು ತಂದುಕೊಡುತ್ತದೆ. ಸುಲಭ ತಾಂತ್ರಿಕತೆಯಿರುವ ಕಸುಬಾಗಿದೆ.


ಜೇನು ನೊಣಗಳು ಪರಾಗ ಸ್ಪರ್ಶದ ಮೂಲಕ ಹಲವಾರು ತೋಟಗಾರಿಕೆ ಬೆಳೆಗಳಲ್ಲಿ ಉತ್ಪಾದನೆಯ ಹೆಚ್ಚಳಕ್ಕೆ ಕಾರಣವಾಗಿ ಪರೋಕ್ಷವಾಗಿ ರೈತರ ಆದಾಯ ಹೆಚ್ಚಿಸಲಿದೆ. ಜೇನುನೊಣಗಳ ಉಪಸ್ಥಿತಿಯಿಂದಾಗಿ ವಿವಿಧ ಇಳುವರಿಯು ಶೇಕಡಾವಾರು 20 ರಿಂದ 80ರವರೆಗೆ ಹೆಚ್ಚಾಗಲಿದೆ. ತೋಟಗಾರಿಕೆ ಬೆಳೆಗಳಾದ ಸೌತೆ, ಕುಂಬಳ, ದ್ರಾಕ್ಷಿ, ಸೀಬೆ, ಟೊಮ್ಯಾಟೊ, ಕಲ್ಲಂಗಡಿ, ತೆಂಗು, ಮಾವು, ಅಡಿಕೆ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಬಹುದು.


ವಿವಿಧ ತೋಟಗಾರಿಕೆ ಬೆಳೆಗಳಾದ ಏಲಕ್ಕಿ, ನಿಂಬೆರ ಹಾಗೂ ತರಕಾರಿ ಬೆಳೆಗಳಾದ ಸೀಮೆಬದನೆ, ಹಾಗಲಕಾಯಿ, ಹೂವಿನ ಬೆಳೆಗಳು, ಔಷಧಿ ಹಾಗೂ ಸುಗಂಧ ದ್ತವ್ಯ ಬೆಳೆಗಳೆಲ್ಲವೂ ಜೇನುನೊಣಗಳ ಪರಾಗ ಸ್ಪರ್ಶದಿಂದ ಪ್ರಯೋಜನ ಹೊಂದುತ್ತವೆ.


ಜೇನು ಕೃಷಿ ಆರಂಭಿಸುವುದರಿಂದ ರೈತರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೆಚ್ಚು ಲಾಭ ಗಳಿಸಬಹುದು. ಉತ್ತಮ ಗುಣಮಟ್ಟದ ಹಾಗೂ ರೋಗರಹಿತ ಜೇನು ಕುಟುಂಬಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದನೆ ಹಾಗೂ ವಿತರಿಸುವ ಉದ್ದೇಶದಿಂದ ಖಾಸಗಿ ಮಧುವನಗಳ ಸ್ಥಾಪನೆಗೂ ಸಹ ಹೆಚ್ಚಿನ ಮಹತ್ವ ನೀಡಲಾಗಿದೆ.


ಆಸಕ್ತ ರೈತರು ನಿಗದಿತ ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲಾತಿಗಳಾದ ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಚೆಕ್ ಬಂದಿ, ಸ್ವಯಂ ಬೆಳೆ ದೃಢೀಕರಣ, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಇತ್ಯಾದಿಗಳೊಂದಿಗೆ ಜುಲೈ 31ರೊಳಗೆ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಗೆ ಅಂಚೆ ಮೂಲಕ ಸಲ್ಲಿಸಲು ಕೋರಿದೆ.


ಕೋವಿಡ್-19ರ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ರೈತರು ನೇರವಾಗಿ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.