ಯಾವ್ ಮುಖ ಇಟ್ಕೊಂಡು ಮೈತ್ರಿ ನಾಯಕರು ಪ್ರಮಾಣವಚನ ಕಾರ್ಯಕ್ರಮಕ್ಕೆ ಬರ್ತಾರೆ?: ಡಿ.ವಿ.ಸದಾನಂದಗೌಡ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಿಂದಾಗಿ ರಾಜ್ಯಕ್ಕೆ ತಟ್ಟಿದ್ದ ಶಾಪ ವಿಮೋಚನೆ ಆದಂತಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಕಾರ್ಯಕ್ರಮಕ್ಕೆ ಮೈತ್ರಿ ನಾಯಕರು ಯಾವ ಮುಖ ಇಟ್ಕೊಂಡು ಬರ್ತಾರೆ? ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಯಡಿಯೂರಪ್ಪನವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸದಾನಂದ ಗೌಡ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಹಲವು ದಿನಗಳ ಹಿಂದೆಯೇ ಯಡಿಯೂರಪ್ಪ ಅವರು ಸಿಎಂ ಆಗಬೇಕಿತ್ತು. ಆದರೆ ಈಗ ಆಗುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಿಂದಾಗಿ ರಾಜ್ಯಕ್ಕೆ ತಟ್ಟಿದ್ದ ಶಾಪ ವಿಮೋಚನೆ ಆದಂತಾಗಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಿಂದಾಗಿ ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಲೆ ಆರಂಭವಾಗಲಿದೆ ಎಂದು ಸದಾನಂದಗೌಡ ಹೇಳಿದರು.
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್-ಜೆಡಿಎಸ್ ನಾಯಕರು ಹಾಜರಾಗದಂತೆ ಅವರ ಪಕ್ಷದ ವರಿಷ್ಟರು ಸೂಚನೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದಗೌಡ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ದುರಾಡಳಿತ ನೀಡಿದೆ. ಅಲ್ಲದೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ರಾಜ್ಯದ ಜನತೆ ಅವರ ಆಡಳಿತದಿಂದ ಬೇಸತ್ತಿದ್ದಾರೆ. ಹೀಗಿರುವಾಗ ವಿಶ್ವಾಸ ಕಳೆದುಕೊಂಡ ಮೇಲೆ ಸಮಾರಂಭಕ್ಕೆ ಯಾವ್ ಮುಖ ಇಟ್ಕೊಂಡು ಬರ್ತಾರೆ ಎಂದು ಹರಿಹಾಯ್ದರು.